ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 68 ಸ್ಥಾನಗಳ ವಿಧಾನಸಭೆಯಲ್ಲಿ 40 ಸ್ಥಾನ ಗೆದ್ದಿರುವ ಕಾಂಗ್ರೆಸ್ ಅಧಿಕ್ಕಾರಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಸಭೆ ಸೇರಿದ್ದರು. ಹಿಮಾಚಲ ಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಳ್ಳಲಿ ಎಂದು ಸರ್ವಾನುಮತದಿಂದ ಸಾಶಕರು ನಿರ್ಣಯ ಕೈಗೊಂಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮುಖ್ಯಮಂತ್ರಿ ಆಕಾಂಕ್ಷಿಗಳಾದ ಪ್ರತಿಭಾ ಸಿಂಗ್, ಮುಖೇಶ್ ಅಗ್ನಿಹೋತ್ರಿ ಮತ್ತು ಸುಖವಿಂದರ್ ಸಿಂಗ್ ಸುಖು ಅವರು ತಮ್ಮ ಬೆಂಬಲಿಗರೊಂದಿಗೆ ರಾಜ್ಯ ರಾಜಧಾನಿ ಶಿಮ್ಲಾದ ಪಕ್ಷದ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಅವರವರ ಬೆಂಬಲಿಗರು ತಮ್ಮ ನಾಯಕರ ಪರ ಘೋಷಣೆ ಕೂಗಿದರು. ಈ ಮೂಲಕ ತಮಗೆ ಸಿಎಂ ಪಟ್ಟ ಬೇಕು ಎಂದು ವಕಾಲತ್ತು ವಹಿಸುವ ಮೂಲಕ ಸಿಎಂ ಪಟ್ಟ ತಮಗೇ ಬೇಕು ಎಂದು ಬೇಡಿಕೆ ಸಲ್ಲಿಸಿದರು. ಹೀಗಾಗಿ ಹೈಕಮಾಂಡ್ ಸಿಎಂ ಯಾರನ್ನು ಮಾಡಬೇಕು ಎಂಬ ಇಕ್ಕಟ್ಟಿನಲ್ಲಿ ಸಿಲುಕಿದೆ.
ಇದಾದ ಬಳಿಕ ಶಾಸಕರ ಸಭೆ ನಡೆಯಿತು. ಎರಡು ಗಂಟೆಗಳ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ, ಒಂದು ಸಾಲಿನ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಮತ್ತು ಪಕ್ಷದ ವೀಕ್ಷಕರು ತಮ್ಮ ವರದಿಯನ್ನು ಹೈಕಮಾಂಡ್‌ಗೆ ಇಂದು ಸಲ್ಲಿಸಲಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಯಾವುದೇ ಹೆಸರು ಬಂದಿಲ್ಲ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವಾರು ನಾಯಕರು ಲಾಬಿ ನಡೆಸುತ್ತಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎಂಬ ವಿಚಾರವನ್ನು ತಳ್ಳಿಹಾಕಿದ ಶುಕ್ಲಾ, ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಯಾವುದೇ ಹೆಸರು ಪ್ರಸ್ತಾಪ ಆಗಿಲ್ಲ. ಈ ಬಗ್ಗೆ ಪಕ್ಷದ ನಾಯಕತ್ವವು ಕರೆಯನ್ನು ತೆಗೆದುಕೊಳ್ಳುತ್ತದೆ ಎಂದು ಶಾಸಕರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಕೊಟ್ಟ ಎಲ್ಲ ಭರವಸೆ ಈಡೇರಿಸುತ್ತೇವೆ: ರಾಜ್ಯದಲ್ಲಿ ಸರ್ಕಾರ ರಚಿಸುವ ಅವಕಾಶ ಸಿಕ್ಕಿರುವುದಕ್ಕೆ ಕಾಂಗ್ರೆಸ್ ಸಂತಸ ವ್ಯಕ್ತಪಡಿಸಿದ್ದು, ಜನರಿಗೆ ನೀಡಿರುವ 10 ಭರವಸೆಗಳನ್ನು ಈಡೇರಿಸಲು ಹಾಗೂ ಉತ್ತಮ ಆಡಳಿತ ನೀಡಲು ಎಲ್ಲವನ್ನೂ ಮಾಡುವುದಾಗಿ ರಾಜೀವ್ ಶುಕ್ಲಾ ಇದೇ ವೇಳೆ ಭರವಸೆ ನೀಡಿದರು.
ಇಡೀ ಕಾಂಗ್ರೆಸ್ ಪಕ್ಷವು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರನ್ನು ಗೌರವಿಸುತ್ತದೆ ಎಂದು ಹೇಳಿದ ಶುಕ್ಲಾ, ರಾಜ್ಯವು ತನ್ನ ಮೊದಲ ಮಹಿಳಾ ಮುಖ್ಯಮಂತ್ರಿಯನ್ನು ಪಡೆಯುವ ಸಾಧ್ಯತೆ ಬಗ್ಗೆ ಸ್ಪಷ್ಟವಾಗಿ ಹೇಳದೇ ನುಣಿಚಿಕೊಂಡರು.
ಶುಕ್ಲಾ ಅವರ ಜತೆ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಇದ್ದರು. ಇದೇ ವೇಳೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಮತ್ತು ಸುಖು ಸಹ ಇದ್ದರು.
ಇದಕ್ಕೂ ಮೊದಲು ಬಘೇಲ್ ಕಾರಿಗೆ ಮುತ್ತಿಗೆ: ಇದಕ್ಕೂ ಮೊದಲು, ಪಕ್ಷದ ಕೇಂದ್ರ ವೀಕ್ಷಕರಾದ ಬಘೇಲ್ ಮತ್ತು ಹೂಡಾ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಶ್ರಮಿಸುತ್ತಿದ್ದಂತೆ, ಪಕ್ಷದ ರಾಜ್ಯಾಧ್ಯಕ್ಷೆ ಮತ್ತು ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರ ಬೆಂಬಲಿಗರ ಗುಂಪು ಅವರ ವಾಹನವನ್ನು ತಡೆದು ಘೋಷಣೆಗಳನ್ನು ಕೂಗಿದ ಘಟನೆ ನಡೆಯಿತು.
ಇನ್ನುಂದು ಕಡೆ ಸುಖು ಬೆಂಬಲಿಗರು ಅವರ ಪರ ಘೋಷಣೆ ಕೂಗಿ ಸಿಎಂ ಪಟ್ಟಕ್ಕೆ ಒತ್ತಡ ಹೇರಿದ ಘಟನೆ ನಡೆದಿದೆ. ಹೀಗಾಗಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಶಾಸಕರಿಗೆ ಸಾಧ್ಯವಾಗಿಲ್ಲ. ಅನಿವಾರ್ಯವಾಗಿ ಈ ಹೊಣೆ ಈಗ ಹೈ ಕಮಾಂಡ್ ಅಂಗಳಕ್ಕೆ ಹೋಗಿದೆ.
ಇದನ್ನು ಓದಿ: ಯಾರಾಗಲಿದ್ದಾರೆ ಹಿಮಾಚಲದ ಸಿಎಂ?: ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಈ ಬಗ್ಗೆ ಹೇಳಿದ್ದೇನು?