ಉನ್ನಾವೋ(ಉತ್ತರ ಪ್ರದೇಶ): ಇತ್ತೀಚೆಗೆ ಚೀನಾದಿಂದ ಹಿಂತಿರುಗಿದ ಆಗ್ರಾದ ವ್ಯಕ್ತಿಯಲ್ಲಿ ಮೊದಲ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಉನ್ನಾವೊ ಜಿಲ್ಲೆಯಲ್ಲಿ ಎರಡನೇ ಕೋವಿಡ್ ಪ್ರಕರಣ ಪತ್ತೆಯಾಗಿದೆ. ದುಬೈಗೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ತಾನೇ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಕೋವಿಡ್ ಪಾಸಿಟಿವ್ ಎಂದು ವರದಿಯಾಗಿದೆ.
ಜಿಲ್ಲಾ ಸಬ್ ಮ್ಯಾಜಿಸ್ಟ್ರೇಟ್ ಅಂಕಿತ್ ಶುಕ್ಲಾ ಅವರು ಅರೋಗ್ಯ ಇಲಾಖೆ ತಂಡದೊಂದಿಗೆ ಕೋವಿಡ್ -19 ಪಾಸಿಟಿವ್ ವರದಿ ಬಂದ ಯುವಕನ ಮನೆಗೆ ಭೇಟಿ ನೀಡಿದ್ದು, ಯುವಕನ ಕುಟುಂಬ ಸದಸ್ಯರು ಸೇರಿದಂತೆ 20 ಜನರ ಮಾದರಿಗಳನ್ನು ಸಂಗ್ರಹಿಸಿದ್ದು, ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿಯಂತೆ ಸ್ಥಳೀಯ ಆಡಳಿತ ಯುವಕನನ್ನು ಐಸೋಲೇಷನ್ನಲ್ಲಿ ಇರಿಸಿದ್ದಾರೆ. ಅದರ ಜೊತೆಗೆ ಯುವಕನಿಂದ ಸಂಗ್ರಹಿಸಿದ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಮಾಡಿಸಲು ಕಳುಹಿಸಲಾಗುವುದು ಎಂದು ತಿಳಿಸಿದೆ.
ತಿಂಗಳ ನಂತರ ವರದಿಯಾದ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ: ಕೋವಿಡ್ ಪಾಸಿಟಿವ್ ಬಂದ ಯುವಕ ಉನ್ನಾವೋದ ಹಸನ್‌ಗಂಜ್ ತಹಸಿಲ್ ಪ್ರದೇಶದ ಕೊರೌರಾ ಗ್ರಾಮದ ನಿವಾಸಿ. ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯೊಬ್ಬರಿಗೆ ಭಾನುವಾರ ಕೋವಿಡ್ -19 ಪಾಸಿಟಿವ್ ವರದಿಯಾಗಿತ್ತು. ನಂತರ ಅವರನ್ನು ಆಗ್ರಾದ ಅವರ ಮನೆಯಲ್ಲಿ ಐಸೋಲೇಷನ್ ಮಾಡಲಾಗಿದೆ ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಅರುಣ್ ಶ್ರೀವಾಸ್ತವ ಹೇಳಿದ್ದಾರೆ.
ಆ ವ್ಯಕ್ತಿ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಮಾಡಿಸಲು ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಪಾಸಿಟಿವ್ ವರದಿಯಾದ ವ್ಯಕ್ತಿಯ ಮನೆಯನ್ನ್ನುನು ಸೀಲ್ ಮಾಡಿರುವ ಅಧಿಕಾರಿಗಳು ವ್ಯಕ್ತಿಯನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿ ಐಸೋಲೇಷನ್ ನಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಅವರ ಕುಟುಂಬ ಸದಸ್ಯರು ಹಾಗೂ ಅವರ ಸಂಪರ್ಕಕ್ಕೆ ಬಂದವರೆಲ್ಲರಿಗೂ ಮಾದರಿ ಕಲೆಹಾಕಿ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಯ ತಂಡಗಳಿಗೆ ಸೂಚನೆ ನಿಡಲಾಗಿದೆ ಎಂದು ಶ್ರೀವಾಸ್ತವ್ ತಿಳಿಸಿದರು.
ಈ ವ್ಯಕ್ತಿ ಡಿಸೆಂಬರ್ 23 ರಂದು ಚೀನಾದಿಂದ ದೆಹಲಿ ಮೂಲಕ ಆಗ್ರಾಕ್ಕೆ ಹಿಂದಿರುಗಿದ್ದರು. ಚೀನಾದಿಂದ ಆಗ್ರಾಕ್ಕೆ ಬಂದ ಅವರನ್ನು ಅನಾರೋಗ್ಯ ಪೀಡಿತರಾಗಿದ್ದ ಕಾರಣ ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಯಿತು. ಭಾನುವಾರ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ನವೆಂಬರ್ 25ರ ನಂತರ ಆಗ್ರಾ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ನೆರೆಯ ದೇಶ ಚೀನಾದಲ್ಲಿ ಕೋವಿಡ್ ಅಲೆ ಮತ್ತೆ ಎದ್ದಿದ್ದು, ಚೀನಾದ ಕೋವಿಡ್ನ BF.7 ರೂಪಾಂತರಿ ವೈರಸ್ನ ಆತಂಕ ಹೆಚ್ಚಾಗಿದ್ದು, ಭಾರತದಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಈಗಾಗಲೇ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಅಂತಾರಾಷ್ಟ್ರೀಯ ಪ್ರಯಾಣಿಕರು ಅದರಲ್ಲೂ ಚೀನಾದಿಂದ ಹಿಂತಿರುಗುತ್ತಿರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ನೆಟ್ಟಿದೆ.
ಈಗಾಗಲೇ ಪಾಸಿಟಿವ್ ವರದಿಯಾಗಿರುವ ಎರಡು ಪ್ರಕರಣಗಳ ವ್ಯಕ್ತಿಗಳ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ಅವರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸುವ ಕೆಲಗಳನ್ನು ಜಿಲ್ಲಾಡಳಿತ ಮಾಡುತ್ತಿದೆ. ಅದಷ್ಟೇ ಅಲ್ಲದೆ ವಿದೇಶದಿಂದ ಬರುವ ಪ್ರಯಾಣಿಕರನ್ನು ಐಸೋಲೇಷನ್ನಲ್ಲಿ ಇರಿಸಿ ಅವರ ಮೇಲೆ 7 ದಿನಗಳ ಕಾಲ ನಿಗಾ ಇಡಲಾಗುತ್ತಿದೆ. ಯಾರಲ್ಲಾದರೂ ಶೀತ, ಜ್ವರದಂತಹ ಕೊರೊನಾ ಲಕ್ಷಣಗಳು ಕಂಡುಬಂದರೆ ಅವರಿಗೆ ತಕ್ಷಣ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಹೀಗೆ ಕೋವಿಡ್ ವಿರುದ್ಧ ಕೇಂದ್ರ ಸರ್ಕಾರ ನಿಗಾ ಕ್ರಮಗಳನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಚೀನಾದಿಂದ ಮರಳಿದ ಆಗ್ರಾ ವ್ಯಕ್ತಿಗೆ ಕೋವಿಡ್ ಪಾಸಿಟಿವ್: BF.7 ಆತಂಕ