ನವದೆಹಲಿ: ಶ್ರದ್ಧಾಳ ಗುರುತು ಸಿಗದಂತೆ ಮಾಡುವುದಕ್ಕಾಗಿ ತಾನು ಆಕೆಯ ಮುಖವನ್ನು ಸುಟ್ಟು ವಿರೂಪಗೊಳಿಸಿದ್ದೆ ಎಂದು ಕೊಲೆಗಾರ ಅಫ್ತಾಬ್ ಪೂನಾವಾಲಾ ಹೇಳಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊದಲಿಗೆ ತಾನು ಶ್ರದ್ಧಾಳ ದೇಹವನ್ನು 35 ಪೀಸ್ಗಳಾಗಿ ಮಾಡಿದೆ. ನಂತರ ಆಕೆಯ ರುಂಡ ಯಾರಿಗಾದರೂ ಸಿಕ್ಕರೂ ಮುಖದ ಗುರುತು ತಿಳಿಯದ ಹಾಗೆ ಮುಖವನ್ನು ಸುಟ್ಟು ಹಾಕಿದ್ದಾಗಿ ಆತ ಹೇಳಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತದೇಹ ಯಾರಿಗೂ ಸಿಗದಂತೆ ಕಣ್ಮರೆಯಾಗಿಸುವುದು ಸೇರಿದಂತೆ ಈ ಎಲ್ಲವನ್ನೂ ತಾನು ಇಂಟರ್ನೆಟ್ನಲ್ಲಿ ಕಲಿತಿರುವುದಾಗಿ ಅಫ್ತಾಬ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ.
ಶ್ರದ್ಧಾ ವಾಕರ್ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆಯಲ್ಲಿ, ದೆಹಲಿ ದಕ್ಷಿಣ ಜಿಲ್ಲೆ ಪೊಲೀಸರು ಪೂರ್ವ ಜಿಲ್ಲೆಯ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೂರ್ವ ಜಿಲ್ಲೆ ಪೊಲೀಸರು ಜೂನ್ ಆರಂಭದಲ್ಲಿ ಮಾನವ ತಲೆ ಹಾಗೂ ಇನ್ನಿತರ ದೇಹದ ಭಾಗಗಳನ್ನು ಪತ್ತೆ ಮಾಡಿದ್ದರು. ಈಗ ಈ ಅವಶೇಷಗಳನ್ನು ಡಿಎನ್ಎ ಟೆಸ್ಟ್ ಮಾಡಿಸಲು ದಕ್ಷಿಣ ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ.
ಮೂಲಗಳ ಪ್ರಕಾರ, ಪೂರ್ವ ದೆಹಲಿ ಪೊಲೀಸರಿಗೆ ಈ ವರ್ಷ ಜೂನ್‌ನಲ್ಲಿ ರಾಷ್ಟ್ರ ರಾಜಧಾನಿಯ ಪಾಂಡವ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಲೋಕಪುರಿ ಪ್ರದೇಶದಲ್ಲಿ ಕತ್ತರಿಸಿದ ತಲೆ ಮತ್ತು ಕೈ ಸಿಕ್ಕಿದ್ದವು. ಅಂದರೆ ಶ್ರದ್ಧಾ ಹತ್ಯೆಯಾದ ಸುಮಾರು ಒಂದು ತಿಂಗಳ ನಂತರ (ಮೇ 18 ರಂದು) ಇವು ಸಿಕ್ಕಿದ್ದವು.
ಪೂರ್ವ ದೆಹಲಿಯ ಪ್ರಕರಣದಲ್ಲಿ, ಪತ್ತೆಯಾದ ದೇಹದ ಭಾಗಗಳು ವಿರೂಪಗೊಂಡಿದ್ದರಿಂದ ಅವು ಯಾರ ದೇಹದ ಭಾಗಗಳೆಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಪೂರ್ವ ದೆಹಲಿಯಲ್ಲಿ ಪತ್ತೆಯಾದ ದೇಹದ ಭಾಗಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದ್ದು, ಫೊರೆನ್ಸಿಕ್ ವರದಿ ಶೀಘ್ರದಲ್ಲೇ ಬರಲಿದೆ.
ಇದನ್ನೂ ಓದಿ: ಪ್ರಿಯತಮೆ ಜೊತೆಗೆ ಲಿವ್ ಇನ್, ಆಕೆಯ ತಂಗಿಯ ಮೇಲೆ ರೇಪ್: ಲವ್ ಜಿಹಾದ್ ಶಂಕೆ