ಗಾಜಿಯಾಬಾದ್: ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ ಅಲ್ಲಿನ ಸಂಸದರೊಬ್ಬರು ಆಫ್ಘನ್ನಲ್ಲಿನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಕಳೆದ 20 ವರ್ಷಗಳಲ್ಲಿನ ಎಲ್ಲ ಅಭಿವೃದ್ಧಿ ಕಾರ್ಯಗಳು ಈಗ ನಾಮಾವಶೇಷವಾಗಿವೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿರುವ ತಾಲಿಬಾನ್ ಉಗ್ರರಿಂದ ಪಾರು ಮಾಡಲು ಭಾರತ ಸರ್ಕಾರ ಅಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಕರೆತರುವ ಕಾರ್ಯ ಮಾಡುತ್ತಿದೆ. ಇಂದು ಕೂಡ ಕಾಬೂಲ್ನಿಂದ ಭಾರತೀಯ ವಾಯುಪಡೆಯ (ಐಎಎಫ್) ಸಿ -17 ವಿಮಾನದಲ್ಲಿ 107 ಭಾರತೀಯ ಪ್ರಜೆಗಳು ಸೇರಿದಂತೆ 168 ಮಂದಿ ಗಾಜಿಯಾಬಾದ್ ಏರ್ಪೋರ್ಟ್ಗೆ ಬಂದಿಳಿದಿದ್ದಾರೆ.
ಇದನ್ನೂ ಓದಿ: ಕಾಬೂಲ್ನಿಂದ 168 ಪ್ರಯಾಣಿಕರನ್ನು ಹೊತ್ತು ಗಾಜಿಯಾಬಾದ್ಗೆ ಬಂತು C-17 ವಿಮಾನ
ನವದೆಹಲಿ ಹಾಗೂ ಉತ್ತರ ಪ್ರದೇಶದ ಗಡಿಭಾಗವಾದ ಗಾಜಿಯಾಬಾದ್ನ ಹಿಂಡನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರಲ್ಲಿ ಅಫ್ಘಾನಿಸ್ತಾನದ ಸಂಸದ ನರೇಂದರ್ ಸಿಂಗ್ ಖಾಲ್ಸಾ ಕೂಡ ಒಬ್ಬರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ನನಗೆ ಅಳಬೇಕೆನಿಸುತ್ತಿದೆ. ಇಂತಹ ಪರಿಸ್ಥಿತಿಯನ್ನು ಕಂಡಿರಲಿಲ್ಲ ನಾವು. 20 ವರ್ಷಗಳಲ್ಲಿ ಸರ್ಕಾರ ನಿರ್ಮಿಸಿದ್ದ ಎಲ್ಲವೂ ಈಗ ನಾಶವಾಗಿದೆ. ಈಗೆಲ್ಲಾ ಬರೀ ಶೂನ್ಯ" ಎಂದು ಕಣ್ಣೀರಿಟ್ಟಿದ್ದಾರೆ.