ನವದೆಹಲಿ: ನಮ್ಮ ಗಡಿಯನ್ನು ರಕ್ಷಿಸುತ್ತಿರುವ ಬಿಎಸ್ಎಫ್ ಯೋಧರು ಸುಡುವ ಬಿಸಿಲು - ಗಾಳಿಯನ್ನು ಲೆಕ್ಕಿಸದೇ ದೇಶಕ್ಕಾಗಿ ಹಗಲಿರುಳು ಹೋರಾಡುತ್ತಿರುತ್ತಾರೆ. ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿರುವ ನಮ್ಮ ಜವಾನರಿಗೆ ಇದೀಗ ಚಳಿಗಾಲ ಸಹ ದೊಡ್ಡ ಸವಾಲಾಗಿದೆ.
ಯೋಧರು ಚಳಿಗಾಲದಲ್ಲಿ ವಿವಿಧ ಸಮಸ್ಯೆಗಳಿಗೆ ಸಿಲುಕಬೇಕಾಗುತ್ತದೆ. ಭಾರತ - ಬಾಂಗ್ಲಾದೇಶ ಗಡಿಯಲ್ಲಿ ನಿಯೋಜಿಸಲಾಗಿರುವ ಬಿಎಸ್‌ಎಫ್ ಯೋಧರಿಗೆ ಗಡಿಯಲ್ಲಿ ದಟ್ಟವಾದ ಮುಂಜು ಮುಸುಕಿದ ವಾತಾವರಣವಿರುವ ಹಿನ್ನೆಲೆ ಮಂಜಿನೊಂದಿಗೆ ಸೆಣೆಸಾಟ ನಡೆಸುತ್ತಾ ಗಡಿ ಕಾಯುವುದು ದೊಡ್ಡ ಸವಾಲಾಗಿದೆ.
ಈ ಹವಾಮಾನ ಯೋಧರಿಗೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತಿದೆ. ಗಡಿಯಾಚೆಗಿರುವ ಕಳ್ಳಸಾಗಾಣಿಕೆದಾರರ ಸ್ಪಷ್ಟ ಚಿತ್ರಣ ಗೋಚರಿಸುವುದಿಲ್ಲ. ಈ ವೇಳೆ ಕಳ್ಳಸಾಗಾಣಿಕೆದಾರರು ಸೈನಿಕರ ಮೇಲೆ ದಾಳಿ ಮಾಡುವ ಸಾಧ್ಯತೆ ಕೂಡ ಇದೆ.
ಈ ಕುರಿತು 65 ನೇ ಬೆಟಾಲಿಯನ್‌ನ ಕಮಾಂಡೆಂಟ್ ಅನಿಲ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಚಳಿಗಾಲದಲ್ಲಿ ಭಾರೀ ಮಂಜಿನಿಂದಾಗಿ ನಾವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಮಂಜಿನಿಂದಾಗಿ ಗೋಚರತೆ ಕೂಡ ಕಡಿಮೆ. ಇದು ದೊಡ್ಡ ಸವಾಲಾಗಿದ್ದು, ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.