ತಿರುವನಂತಪುರಂ (ಕೇರಳ) : ಚಂದ್ರಯಾನ-3 ಬಾಹ್ಯಾಕಾಶ ಯೋಜನೆಯ ಲ್ಯಾಂಡರ್ 'ವಿಕ್ರಮ್' ಈಗಾಗಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ವೈಜ್ಞಾನಿಕ ಸಂಶೋಧನೆಗಳ ಕೆಲಸ ಪ್ರಾರಂಭಿಸಿದೆ. ಇದರ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ತಮ್ಮ ಮುಂದಿನ ಗಮನವನ್ನು ಸೂರ್ಯನತ್ತ ಕೇಂದ್ರೀಕರಿಸಿದ್ದು, ದೇಶದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಉಡಾವಣೆಗೆ ಸಿದ್ಧವಾಗಿದೆ. ಈ ನೌಕೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥ ಎಸ್. ಸೋಮನಾಥ್ ಶನಿವಾರ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥರು, "ಆದಿತ್ಯ ಎಲ್ 1 ಉಪಗ್ರಹ ಸಿದ್ಧವಾಗಿದೆ. ಈಗಾಗಲೇ ಶ್ರೀಹರಿಕೋಟಾವನ್ನು ತಲುಪಿದ್ದು, ಪಿಎಸ್‌ಎಲ್‌ವಿಗೆ ಸಂಪರ್ಕ ಹೊಂದಿದೆ. ಇಸ್ರೋದ ಮುಂದಿನ ಗುರಿ ಆದಿತ್ಯ ಎಲ್ 1ರ ಯಶಸ್ವಿ ಉಡಾವಣೆ. ಈ ಕಾರ್ಯ ಸೆಪ್ಟೆಂಬರ್ ಮೊದಲ ವಾರದಲ್ಲೇ ನಡೆಯಲಿದೆ. ಮುಂದಿನ ಎರಡು ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು" ಎಂದು ಹೇಳಿದರು.
ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯ. ಇದು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ನೆಲೆಗೊಳ್ಳಲಿದೆ. ಉಡಾವಣೆಯ ಬಳಿಕ L1 ಪಾಯಿಂಟ್‌ಗೆ ಪ್ರಯಾಣಿಸಲು ಸುಮಾರು 120 ದಿನಗಳನ್ನು ತೆಗೆದುಕೊಳ್ಳುತ್ತದೆ. ಆ ಬಳಿಕ ಸೂರ್ಯನ ಕುರಿತು ಅಭೂತಪೂರ್ವ ಒಳನೋಟಗಳನ್ನು ಒದಗಿಸುವ ಗುರಿ ಹೊಂದಿದೆ.
ಇದನ್ನೂ ಓದಿ : Chandrayaan-3.. 'ಶಿವಶಕ್ತಿ ಪಾಯಿಂಟ್'ನಲ್ಲಿ ಓಡಾಡುತ್ತಿರುವ ಪ್ರಜ್ಞಾನ್ ರೋವರ್.. ತಾಜಾ ವಿಡಿಯೋ ಹಂಚಿಕೊಂಡ ಇಸ್ರೋ
ಈ ಆಯಕಟ್ಟಿನ ಸ್ಥಳವು ಆದಿತ್ಯ-L1 ಗೆ ಗ್ರಹಣಗಳಿಂದ ಅಥವಾ ಇತರೆ ನಿಗೂಢತೆಗಳಿಂದ ಅಡಚಣೆಯಾಗದಂತೆ ನಿರಂತರವಾಗಿ ಸೂರ್ಯನನ್ನು ವೀಕ್ಷಿಸಲು ಸಹಾಯ ಮಾಡಿಕೊಡುತ್ತದೆ. ವಿಜ್ಞಾನಿಗಳು ಸೌರ ಚಟುವಟಿಕೆಗಳನ್ನು ಮತ್ತು ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವವನ್ನು ಅಧ್ಯಯನ ಮಾಡಲು ಈ ಯೋಜನೆ ಅನುವು ಮಾಡಿಕೊಡುತ್ತದೆ.
ಬಾಹ್ಯಾಕಾಶ ನೌಕೆಯು ಸೂರ್ಯನ ವಿವಿಧ ಪದರಗಳಾದ ದ್ಯುತಿಗೋಳ ಮತ್ತು ಕ್ರೋಮೋಸ್ಪಿಯರ್‌ನಿಂದ ಹೊರಗಿನ ಪದರವಾದ ಕರೋನಲ್ವರೆಗೆ ಸೂಕ್ಷ್ಮವಾಗಿ ಪರಿಶೀಲಿಸಲು ವಿನ್ಯಾಸಗೊಳಿಸಲಾದ ಏಳು ಸುಧಾರಿತ ಪೇಲೋಡ್‌ಗಳನ್ನು ಹೊಂದಿದೆ. ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಇಜೆಕ್ಷನ್‌ಗಳು, ಸೌರ ಜ್ವಾಲೆಗಳು ಮತ್ತು ಹೆಚ್ಚಿನ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಪ್ರಮುಖವಾದ ದತ್ತಾಂಶ ಸಂಗ್ರಹಿಸವು ಈ ಪೇಲೋಡ್‌ಗಳು ವಿದ್ಯುತ್ಕಾಂತೀಯ, ಕಣ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ ಡಿಟೆಕ್ಟರ್‌ಗಳನ್ನು ಬಳಸಿಕೊಳ್ಳುತ್ತವೆ.
ಇದನ್ನೂ ಓದಿ : ಚಂದ್ರನ ದಕ್ಷಿಣ ಧ್ರುವದಲ್ಲಿ 8 ಮೀಟರ್ ದೂರ ಕ್ರಮಿಸಿದ ರೋವರ್ ಪ್ರಜ್ಞಾನ್: ಇಸ್ರೋ
ಉಪಗ್ರಹದಲ್ಲಿನ ಪೆಲೋಡ್ಗಳನ್ನು ಸೂರ್ಯನಿಂದ ಹೊರಸೂಸುವ ಅತ್ಯಂತ ಶಕ್ತಿಶಾಲಿ ಕಿರಣಗಳನ್ನು ಅಧ್ಯಯನ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳು ದ್ಯುತಿಗೋಳ, ವರ್ಣಗೋಳ, ಸೂರ್ಯನ ಹೊರ ಪದರಗಳು, ಸೌರ ಶಕ್ತಿ ಕೋಶಗಳು ಮತ್ತು ಸೂರ್ಯನ ಕಾಂತಕ್ಷೇತ್ರವನ್ನು ಅಧ್ಯಯನ ನಡೆಸಲಿವೆ. (ಎಎನ್‌ಐ)