ನವದೆಹಲಿ: ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಎಡವಟ್ಟಿನ ಹೇಳಿಕೆಗಳು ತಮ್ಮದೇ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಿವೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ಕಳೆದ ಮೂರು ದಿನಗಳಿಂದ ಸಂಸತ್ತಿನೊಳಗೆ ಮತ್ತು ಬೀದಿಗಿಳಿದು ಹೋರಾಟ ಮಾಡುತ್ತಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿಯನ್ನು ಇಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಇಂತಹ ಹೊತ್ತಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಅಧೀರ್ ರಂಜನ್ ಚೌಧರಿ ಹೇಳಿಕೆಯು ಕಾಂಗ್ರೆಸ್ ಹೋರಾಟವನ್ನು ಮಣ್ಣು ಪಾಲು ಆಗುವಂತೆ ಮಾಡುತ್ತಿದೆ.
ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುವ ಅಧೀರ್ ರಂಜನ್ ಚೌಧರಿ, ರಾಜ್ಯ ಕಾಂಗ್ರೆಸ್ ಪಾಲಿಗೆ ಹಿರಿಯ ಮುಖ. ಆದರೆ, ಸಂಸತ್ತಿನೊಳಗೆ ಅಥವಾ ಸಂಸತ್ತಿನ ಹೊರಗೆ ಹೇಳಿಕೆಗಳನ್ನು ನೀಡುವಾಗ ಯಾವಾಗಲೂ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ಈ ಹೇಳಿಕೆಗಳು ವಿವಾದ ಸ್ವರೂಪ ಪಡೆದಾಗ ಹಿಂದಿ ಸರಿಯಾಗಿ ಗೊತ್ತಿಲ್ಲ ಎನ್ನುತ್ತಾ ಕ್ಷಮಿಸಿ ಎಂದು ಹೇಳುತ್ತಾರೆ.
ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಹೇಳಿಕೆ ಬಗ್ಗೆಯೂ ಹಿಂದಿಯನ್ನೇ ಅಧೀರ್ ರಂಜನ್ ಚೌಧರಿ ಮುಂದಿಟ್ಟಿದ್ದಾರೆ. 'ರಾಷ್ಟ್ರಪತಿ' ಬದಲಿಗೆ 'ರಾಷ್ಟ್ರಪತ್ನಿ' ಹೇಳಿದ್ದು ಹಿಂದಿ ಸಮಸ್ಯೆಯಿಂದಾಗಿ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಏಕೆಂದರೆ ಸ್ವಲ್ಪ ಹಿಂದಿ ತಿಳಿದಿರುವ ಯಾವುದೇ ಬಾಂಗ್ಲಾ ಮಾತನಾಡುವ ವ್ಯಕ್ತಿ ಸಹ 'ರಾಷ್ಟ್ರಪತ್ನಿ' ಮತ್ತು 'ರಾಷ್ಟ್ರಪತಿ' ನಡುವಿನ ವ್ಯತ್ಯಾಸವನ್ನು ತಿಳಿಯದೇ ಇರಲಾರ.
ಹೀಗಾಗಿ ತಮಗೆ ಹಿಂದಿ ಸಮಸ್ಯೆ ಎಂಬ ಅಧೀರ್ ಅವರ ಸಬೂಬು ಎಲ್ಲ ಸಮಯದಲ್ಲೂ ಅನ್ವಯಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿರ್ ಅವರನ್ನು 'ಹೊರೆ' ಎಂದು ಪರಿಗಣಿಸಿದರೆ ಅತಿಶಯೋಕ್ತಿಯಾಗದು ಎಂಬ ಮಾತುಗಳು ಕೇಳಿ ಬರುತ್ತಿವೆ.
370ನೇ ವಿಧಿ ರದ್ದಾದಾಗೂ ಅಚ್ಚರಿಯ ಹೇಳಿಕೆ ಕೊಟ್ಟಿದ್ದ ಚೌಧರಿ: ಈ ಹಿಂದೆ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಇದೇ ಅಧೀರ್ ರಂಜನ್ ಚೌಧರಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಆಂತರಿಕ ವಿಷಯ ಎಂದು ಸರ್ಕಾರ ಪರಿಗಣಿಸಿದೆಯೇ ಎಂದು ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಆಗ ಸದನದಲ್ಲೇ ಇದ್ದ ಸೋನಿಯಾ ಗಾಂಧಿ ಕೂಡ ಅಧೀರ್ ಅವರನ್ನು ಆಶ್ಚರ್ಯದಿಂದಲೇ ನೋಡಿದ್ದರು.
ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೂ ಅಧೀರ್ ರಂಜನ್ ಚೌಧರಿ ಎಡವಟ್ಟು ಮಾಡಿಕೊಂಡಿರುವುದೂ ಇದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನದ ಸಂದರ್ಭದಲ್ಲಿ ವಿವಾದಿತ ಟ್ವೀಟ್ ಮಾಡಿದ್ದರು. ನಂತರ ಈ ಬಗ್ಗೆ ಕ್ಷಮೆ ಕೇಳಿದ್ದ ಅವರು, ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂದೂ ಆರೋಪಿಸಿದ್ದರು. ಅಂದು ಈ ಬಗ್ಗೆ ಹಿರಿಯ ರಾಜಕಾರಣಿ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ಪತನಕ್ಕೆ ಹೊರಗಿನವರು ಬೇಕಿಲ್ಲ, ಆ ಕೆಲಸ ಮಾಡಲು ಪಕ್ಷದೊಳಗೆ ಸಾಕಷ್ಟು ಜನರಿದ್ದಾರೆ ಎಂದು ಟ್ವೀಟ್ ಮಾಡಿ ಕುಟುಕಿದ್ದರು.
ಚೌಧರಿ ಕ್ಷಮೆಯಾಚನೆ: ಈಗ ರಾಷ್ಟ್ರಪತಿ ಹೇಳಿಕೆ ಕುರಿತೂ ಅಧೀರ್ ರಂಜನ್ ಚೌಧರಿ ಕ್ಷಮೆ ಕೇಳಿದ್ದಾರೆ. ಆದರೆ, ಇದಾದ ಮೇಲೂ ಬಿಜೆಪಿಗೆ ಈ ವಿಚಾರವನ್ನೇ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದೆ. ಅದೇನೇ ಇದ್ದರೂ, ರಾಜಕೀಯ ಎಂಬುವುದು 'ಇಮೇಜ್ ಮೇಕ್ ಓವರ್' ಆಟವಾಗಿದೆ. ಇಲ್ಲಿ 'ಇಮೇಜ್' ಹೆಚ್ಚಿಕೊಳ್ಳಲು ವರ್ಷಗಳೇ ಬೇಕಾಗುತ್ತವೆ. ಆದರೆ, ಅದೇ 'ಇಮೇಜ್' ಕೆಲವೇ ಸೆಕೆಂಡುಗಳಲ್ಲಿ ಹಾಳಾಗಬಹುದು. ಇಂತಹ ಪರಿಸ್ಥಿತಿಯನ್ನು ಅಧೀರ್ ರಂಜನ್ ಚೌಧರಿ ತಮ್ಮದೇ ಹೇಳಿಕೆಗಳಿಂದ ತಂದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ದ್ರೌಪದಿ ಮುರ್ಮು ಮತ್ತು ಮಲಾಲಾ... ಎರಡು ಬುಡಕಟ್ಟು ಸಮುದಾಯಗಳ ಹೋರಾಟದ ಕಥೆ!