ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಆರನೇ ಜಾಗತಿಕ ವ್ಯಾಪಾರ ಶೃಂಗಸಭೆ 2022 ನಡೆಯುತ್ತಿದ್ದು, ಇದರಲ್ಲಿ ಅನೇಕ ಉದ್ಯಮಿಗಳು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಕೈಗಾರಿಕೋದ್ಯಮಿ ಗೌತಮ್ ಅದಾನಿ ತಮ್ಮ ಕಂಪನಿ ಅದಾನಿ ಗ್ರೂಪ್ ಪಶ್ಚಿಮ ಬಂಗಾಳದಲ್ಲಿ 25 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಸಲಿದೆ ಎಂಬ ಭರವಸೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ 10 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಸಜ್ಜಾಗಿರುವುದಾಗಿ ತಿಳಿಸಿರುವ ಅದಾನಿ, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಕೋಲ್ಕತ್ತಾದ ನ್ಯೂಟೌನ್ನಲ್ಲಿರುವ ಬಿಸ್ವಾ ಬಾಂಗ್ಲಾ ಸೆಂಟರ್ನಲ್ಲಿ ಹೂಡಿಕೆದಾರರ ಮೊದಲ ದಿನದ ಶೃಂಗಸಭೆ ನಡೆಯುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧನಕರ್ ಸೇರಿದಂತೆ ಭಾರತದ ಪ್ರಮುಖ ಉದ್ಯಮಿಗಳು ಹಾಗೂ ವಿದೇಶಿ ಕೈಗಾರಿಕೋದ್ಯಮಿಗಳು ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಬಿಹಾರದ ಈ ಗ್ರಾಮ ಐಐಟಿಯನ್ನರ ಫ್ಯಾಕ್ಟರಿ; ಪ್ರತಿ ಕುಟುಂಬದಲ್ಲೊಬ್ಬ ಐಐಟಿ ವಿದ್ಯಾರ್ಥಿ!
ಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ, ಬಂಗಾಳ ಇಂದು ಏನು ಯೋಚಿಸುತ್ತದೆ, ಅದರ ಬಗ್ಗೆ ಭಾರತ ನಾಳೆ ಯೋಚನೆ ಮಾಡುತ್ತದೆ. ಯಾವುದೇ ರಾಜ್ಯ ಪಶ್ಚಿಮ ಬಂಗಾಳದಷ್ಟು ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿಲ್ಲ. ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆ ಕೆಲಸ ಮಾಡುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ಅನೇಕ ಸಾಮಾಜಮುಖಿ ಯೋಜನೆ ಜಾರಿಗೊಂಡಿದ್ದು, ನಿಜಕ್ಕೂ ಶ್ಲಾಘನೀಯ ಎಂದರು.