ಮುಂಬೈ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್ ತೆಕ್ಕೆಗೆ ಒಳಪಟ್ಟಿದೆ. ಇನ್ಮುಂದೆ ಇಲ್ಲಿನ ನಿರ್ವಹಣಾ ಜವಾಬ್ದಾರಿಯನ್ನು ಅದಾನಿ ಸಂಸ್ಥೆ ನೋಡಿಕೊಳ್ಳಲಿದೆ. ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಶೇ.74ರಷ್ಟು ಷೇರುಗಳನ್ನು ಅದಾನಿ ಗ್ರೂಪ್‌ನ ಅಂಗ ಸಂಸ್ಥೆಯಾದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ತನ್ನ ಮುಡಿಗೆ ಸೇರಿಸಿಕೊಂಡಿದೆ.
ಇನ್ನು ಮುಂದೆ ಅದಾನಿ ಗ್ರೂಪ್, ಮುಂಬೈ ವಿಮಾನ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಿದೆ. ಅಷ್ಟೇ ಅಲ್ಲದೆ, ಸ್ಥಳೀಯರಿಗೆ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಿದೆ ಎಂದು ಸಮೂಹ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸದ್ಯ ಅದಾನಿ ಸಂಸ್ಥೆಯ ತೆಕ್ಕೆಯಲ್ಲಿ 7 ವಿಮಾನ ನಿಲ್ದಾಣಗಳಿದ್ದು, ಈ ಮೂಲಕ ಭಾರತದ ಅತಿದೊಡ್ಡ ಏರ್‌ಪೋರ್ಟ್ ನಿರ್ವಾಹಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಈಗಾಗಲೇ ಅಹಮದಾಬಾದ್, ಲಖನೌ, ಮಂಗಳೂರು, ಜೈಪುರ, ಗುವಾಹಟಿ, ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್ ನಿರ್ವಹಿಸುತ್ತಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಗೌತಮ್ ಅದಾನಿ, ಮುಂಬೈ ವಿಮಾನ ನಿಲ್ದಾಣದ ಆಡಳಿತ ಮಂಡಳಿಯನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ. ಭವಿಷ್ಯದ ಉದ್ಯಮ ಮತ್ತು ಮನರಂಜನೆ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ವಿಮಾನ ನಿಲ್ದಾಣದ ಎಕೋ ಸಿಸ್ಟಮ್ ರೂಪಿಸಲಾಗುವುದು. ಜೊತೆಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.