ತಿರುಪತಿ (ಆಂಧ್ರಪ್ರದೇಶ) : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣ ಸಂಬಂಧ ಟಾಲಿವುಡ್ನ ಹಿರಿಯ ನಟ ಮಂಚು ಮೋಹನ್ ಬಾಬು ಇಂದು ತಮ್ಮ ಇಬ್ಬರು ಮಕ್ಕಳೊಂದಿಗೆ ಆಂಧ್ರಪ್ರದೇಶದ ತಿರುಪತಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಇದೇ ವೇಳೆ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಸೆಷ್ಟೆಂಬರ್ 30ಕ್ಕೆ ಮುಂದೂಡಿದೆ.
2019ರ ಮಾರ್ಚ್ 22ರಂದು ಅಂದಿನ ಸರ್ಕಾರ ಶಾಲಾ ಶುಲ್ಕವನ್ನು ಮರಳಿ ಕೊಡುತ್ತಿಲ್ಲ ಎಂದು ಆರೋಪಿಸಿ ನಟ ಮೋಹನ್ ಬಾಬು ಕುಟುಂಬ ತಿರುಪತಿ ಮತ್ತು ಮದನಪಲ್ಲಿ ಹೆದ್ದಾರಿಯಲ್ಲಿ ಧರಣಿ ಕುಳಿತಿತ್ತು. ಆದರೆ, ಅಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದ ಕಾರಣ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಹಾಗೂ ಧರಣಿಗೆ ಅನುಮತಿ ಪಡೆದಿಲ್ಲ ಎಂಬ ಆರೋಪದ ಮೇಲೆ ಚಂದ್ರಗಿರಿ ಪೊಲೀಸರು ಮೋಹನ್ ಬಾಬು, ಪುತ್ರರಾದ ವಿಷ್ಣು, ಮನೋಜ್ ಹಾಗೂ ಶ್ರೀವಿದ್ಯಾನಿಕೇತನ ವಿದ್ಯಾಸಂಸ್ಥೆಯ ಎಜ ತುಳಸಿ ನಾಯ್ಡು, ಪಿಆರ್ಒ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದೇ ಪ್ರಕರಣದಲ್ಲಿ ಮೋಹನ್ ಬಾಬು, ತಮ್ಮ ಪುತ್ರರಾದ ವಿಷ್ಣು, ಮನೋಜ್ ಅವರೊಂದಿಗೆ ನ್ಯಾಯಾಲಯಕ್ಕೆ ಹಾಜರಾದರು. ಇಲ್ಲಿನ ಎನ್ಟಿಆರ್ ಸರ್ಕಲ್ನಿಂದ ಅವರು ಕೋರ್ಟ್ ಆವರಣದವರೆಗೆ ನಡೆದುಕೊಂಡೇ ಬಂದರು. ಈ ವೇಳೆ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಕೋರ್ಟ್ ಆವರಣದಲ್ಲೂ ಜನರು ಕಿಕ್ಕಿರಿದಿದ್ದರು. ಅಲ್ಲದೇ, ಮೋಹನ್ ಅವರಿಗೆ ಬಿಜೆಪಿ ಮತ್ತು ವೈಸಿಪಿ ಮುಖಂಡರು ಸಾಥ್ ನೀಡಿದ್ದರು.
ಈ ವೇಳೆ ಮಾತನಾಡಿದ ಅವರು, ನನಗೆ ಯಾವುದೇ ಸಮನ್ಸ್ ನೀಡಿರಲಿಲ್ಲ. ಆದರೆ, ನ್ಯಾಯಾಧೀಶರು ಬರಬೇಕೆಂದು ತಿಳಿಸಿದ್ದರಿಂದ ಕೋರ್ಟ್ಗೆ ಹಾಜರಾಗಿದ್ದೇನೆ. ಅವರ ಸಮ್ಮಖದಲ್ಲೇ ಸಹಿ ಮಾಡಿಸಿಕೊಂಡು ವಿಚಾರಣೆ ಮುಂದೂಡಿದರು. ಇದಕ್ಕಿಂತ ಹೆಚ್ಚಾಗಿ ಏನೂ ಹೇಳುವುದಿಲ್ಲ ಎಂದು ತೆರಳಿದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್: ಇಡಿ ವಿಚಾರಣೆಗೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್