ಹರಿದ್ವಾರ( ಉತ್ತರಾಖಂಡ): ಡ್ರೀಮ್ ಇಲೆವೆನ್‌ನಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಗೆದ್ದ ಖುಷಿಯಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಭಾರಿ ಅವಾಂತರ ಸೃಷ್ಟಿಸಿರುವ ಘಟನೆ ಇಲ್ಲಿ ನಡೆದಿದೆ. ಕುಡಿದ ನಶೆಯಲ್ಲಿ ಗಲಾಟೆ ಮಾಡುತ್ತಿದ್ದ ವ್ಯಕ್ತಿಯ ಕಾಟ ತಡೆಯಲಾಗದೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಸಿಡಕುಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹೇಶ್ ಸಿಂಗ್ ಧಾಮಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಮಹೇಶ್ ಈತ ತಾನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸಂಬಂಧಿ ಎಂದು ಪೊಲೀಸರಿಗೇ ಬೆದರಿಕೆ ಬೇರೆ ಹಾಕಿದ್ದಾರೆ. ಸದ್ಯ ಪೊಲೀಸರು ಈ ವ್ಯಕ್ತಿಯ ವಿರುದ್ಧ ಶಾಂತಿ ಭಂಗದ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಡಕುಲ್ ಪೊಲೀಸ್ ಠಾಣೆಯ ಮಾಹಿತಿಯ ಪ್ರಕಾರ, ಸಿಡಕುಲ್ ಪ್ರದೇಶದ ನಿವಾಸಿ ಮಹೇಶ್ ಸಿಂಗ್ ಧಾಮಿ ಎಂಬ ವ್ಯಕ್ತಿ ಡ್ರೀಮ್ ಇಲೆವೆನ್‌ನಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿದ್ದು, ತೆರಿಗೆ ಕಡಿತಗೊಳಿಸಿ ಆತನ ಖಾತೆಗೆ ಸುಮಾರು 96 ಲಕ್ಷ ರೂಪಾಯಿ ಬಂದಿದೆ. ಇದೇ ಖುಷಿಯಲ್ಲಿ ಕಂಠಪೂರ್ತಿ ಕುಡಿದ ಆತ ಗಲಾಟೆ ಶುರು ಮಾಡಿದ್ದಾನೆ. ಗಲಾಟೆಯಿಂದ ಬೇಸತ್ತು ಯಾರೋ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಆತನನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ.
ಆರೋಪಿಯು ಕುಡಿದ ಅಮಲಿನಲ್ಲಿ ಪೊಲೀಸರಿಗೆ ಸಮವಸ್ತ್ರ ತೆಗೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಮೊದಲಿಗೆ ಪೊಲೀಸರು ಆತನನ್ನು ಸಾಕಷ್ಟು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಯಾವುದಕ್ಕೂ ಬಗ್ಗದಿದ್ದಾಗ ಶಾಂತಿ ಕದಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಸಲಾಗಿದೆ ಎಂದು ಇನ್ಸಪೆಕ್ಟರ್ ರಮೇಶ್ ತನ್ವಾರ್ ತಿಳಿಸಿದ್ದಾರೆ. ಮಹೇಶ್ ಸಿಂಗ್ ಧಾಮಿ ರೋಶನಾಬಾದ್‌ನ ನವೋದಯ ನಗರದ ಡಿಫೆನ್ಸ್ ಕಾಲೋನಿ ನಿವಾಸಿಯಾಗಿದ್ದಾರೆ.
Dream11 ಎಂಬುದು ಬುದ್ಧಿವಂತಿಕೆ ಬಳಸಿ ಆಡುವ ಆನ್‌ಲೈನ್ ಆಟವಾಗಿದ್ದು, ಇದರಲ್ಲಿ ನೀವು ನಿಜ ಜೀವನದ ಪಂದ್ಯಗಳಲ್ಲಿ ಆಡುವ ನೈಜ ಆಟಗಾರರನ್ನು ಸೇರಿಸಿ ಫ್ಯಾಂಟಸಿ ತಂಡವನ್ನು ರಚಿಸಬಹುದು. ಅದರ ನಂತರ, ಲೈವ್ ಗೇಮ್‌ನಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ನೀವು ಗಳಿಸಿದ ಅಂಕಗಳ ಆಧಾರದ ಮೇಲೆ ನೀವು ಹಣ ಪಡೆಯುತ್ತೀರಿ.
ಡ್ರಗ್ಸ್ ಮಾರಾಟ- ಐವರ ಬಂಧನ: ಇನ್ನೊಂದೆಡೆ, ಮುಂಬೈ ಕ್ರೈಂ ಬ್ರಾಂಚ್‌ನ ಆ್ಯಂಟಿ ನಾರ್ಕೋಟಿಕ್ಸ್ ಸೆಲ್ (ANC) ಪೊಲೀಸರು ಇಬ್ಬರು ನೈಜೀರಿಯನ್ ಪ್ರಜೆಗಳು ಮತ್ತು ನಗರದಾದ್ಯಂತ ಶಾಲೆ ಕಾಲೇಜುಗಳ ಬಳಿ ಮಾದಕ ವಸ್ತು ಸರಬರಾಜು ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮೂವರು ಭಾರತೀಯ ಮಹಿಳೆಯರನ್ನು ಪ್ರತ್ಯೇಕವಾಗಿ ಬಂಧಿಸಿದ್ದಾರೆ. ಗುರುವಾರ ನೈಜೀರಿಯನ್ನರನ್ನು ಬಂಧಿಸಲಾಗಿತ್ತು ಹಾಗೂ ಕೆಲ ಭಾರತೀಯರನ್ನು ಬುಧವಾರ ಬಂಧಿಸಲಾಗಿತ್ತು. ಈ ವೇಳೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಪೂರೈಸುವ ತಂಡದ ಬಗ್ಗೆ ಎಎನ್‌ಸಿಗೆ ಮಾಹಿತಿ ಸಿಕ್ಕಿತ್ತು. ೠ
ಅಂಧೇರಿಯ ಸಹರ್ ಗ್ರಾಮದಿಂದ ಬಂಧಿತರಾದ ನೈಜೀರಿಯಾದ ಪ್ರಜೆಗಳನ್ನು ನ್ಡುಕುಸಿ ಉಮಾ ಅಜಾ (23 ವರ್ಷ) ಮತ್ತು ನ್ವೋನಿ ಗಾಡ್ಸ್‌ವಿಲ್ ಓಹ್ಯೆಕಾಚಿ (23) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 55 ಗ್ರಾಂ ಮೆಫೆಡ್ರೋನ್ (ಎಮ್‌ಡಿ) ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಆಯುಕ್ತ (ಅಪರಾಧ) ಲಕ್ಷ್ಮೀ ಗೌತಮ್ ಹೇಳಿದ್ದಾರೆ.
ಇದನ್ನೂ ಓದಿ: ಕುಮಟಾ: ಕಂಠಪೂರ್ತಿ ಕುಡಿದು ಶಿಕ್ಷಕನ ರಂಪಾಟ, ಸಾರ್ವಜನಿಕರ ಆಕ್ರೋಶ