ಹೈದರಾಬಾದ್ : ಕಳೆದ ವಾರದ ಹಿಂದೆ ನಗರದ ಮಲಕ್‌ಪೇಟ್‌ನ ಮೂಸಿ ನದಿಯ ಬಳಿ ಕಪ್ಪು ಪ್ಲಾಸ್ಟಿಕ್ ಹೊದಿಕೆಯಲ್ಲಿ ರುಂಡವಿಲ್ಲದ ಶವವೊಂದು ಪತ್ತೆಯಾಗಿತ್ತು. ಇದೀಗ ಈ ಕೊಲೆ ಪ್ರಕರಣವನ್ನು ಮಲಕ್‌ಪೇಟ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ರುಂಡವಿಲ್ಲದ ಶವವನ್ನು ಎರ್ರಂ ಅನುರಾಧ (55) ಎಂಬ ಮಹಿಳೆ ಎಂದು ಗುರುತಿಸಲಾಗಿದೆ. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ ಕೊನೆಗೂ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸಿದರ ಬಗ್ಗೆ ಆಗ್ನೇಯ ಡಿಸಿಪಿ ರೂಪೇಶ್ ಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ರುಂಡವಿಲ್ಲದ ಶವ ಸಿಕ್ಕ ಬಗ್ಗೆ ಮೊದಲು ಮಲಕ್‌ಪೇಟ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ತನಿಖೆಯ ಮೊದಲ ಹಂತದಲ್ಲಿ ಈ ಶವ ಯಾರದು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು. ಈ ಮಧ್ಯೆ 8 ತಂಡಗಳಾಗಿ ವಿಂಗಡಿಸಿ ಹೈದರಾಬಾದ್ ಪೊಲೀಸರು ತನಿಖೆ ಆರಂಭಿಸಿದ್ದರು. ಒಬ್ಬ ಎಸ್ಐ, ಇಬ್ಬರು ಪೇದೆಗಳು ಸೇರಿ ತಲಾ 3 ತಂಡಗಳಿಗೆ ಒಬ್ಬ ಇನ್ಸ್ ಪೆಕ್ಟರ್, ಇಬ್ಬರು ಎಸಿಪಿಗಳು ತನಿಖೆಯಲ್ಲಿ ಪಾಲ್ಗೊಂಡು ಕೊಲೆ ಪ್ರಕರಣದ ನಿಗೂಢತೆಯನ್ನು ಭೇದಿಸಿದ್ದಾರೆ.
ಮೊದಲನೆಯದಾಗಿ, ’’ರಾಜ್ಯಾದ್ಯಂತ 750 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಬಗ್ಗೆ ನಾವು ಗಮನ ಹರಿಸಿದ್ದೆವು. ಆದರೆ, ಎಲ್ಲಿಯೂ ತಲೆ ಇಲ್ಲದ ಶವ ಸಿಕ್ಕಿರುವ ಪ್ರಕರಣ ದಾಖಲಾಗಿರಲಿಲ್ಲ. ಬಳಿಕ ತನಿಖೆ ಚುರುಕು ಗೊಳಿಸಿ ಒಂದು ವಾರದ ಹಿಂದಿನ ನೂರು ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸಿದೆವು. ಈ ವೇಳೆ ಶವ ಪತ್ತೆಯಾದ ಜಾಗದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿತ್ತು‘‘ ಎಂದು ಡಿಸಿಪಿ ರೂಪೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.
’’ತಾಂತ್ರಿಕ ತಂಡದ ನೆರವಿನಿಂದ ಈ ವ್ಯಕ್ತಿಯ ಹುಡುಕಾಟ ನಡೆಸಿದ್ದಾಗ, ಈತ ಚೈತನ್ಯಪುರಿಯ ಚಂದ್ರಮೋಹನ್ ಎಂಬುದು ಮಾಹಿತಿ ಸಿಕ್ಕಿತ್ತು. ನಂತರ ಅವನು ಇರುವ ಪ್ರದೇಶವನ್ನು ಗುರುತಿಸಿ ಆತನ ಮನೆ ಮೇಲೆ ದಾಳಿ ನಡೆಸಿದೆವು. ಆಗ ಮನೆಯಲ್ಲಿ ಮಹಿಳೆಯ ಕೈ, ಕಾಲು ಹಾಗೂ ಇತರ ಅಂಗಾಂಗಗಳು ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದ. ವಿಚಾರಣೆ ವೇಳೆ ಮತ್ತೊಂದು ಆಘಾತಕಾರಿ ಅಂಶ ಕೂಡಾ ಹೊರಬಿದ್ದಿದೆ. ಮೃತ ಮಹಿಳೆ ದೇಹದ ಭಾಗಗಳು ವಾಸನೆ ಬರದ ಹಾಗೆ ಇರಲು ರಾಸಾಯನಿಕಗಳು ಮತ್ತು ಸ್ಪ್ರೇಗಳನ್ನು ಬಳಸಿರುವುದು ಬಹಿರಂಗಕೊಂಡಿದ್ದು, ದೇಹದ ಉಳಿದ ಭಾಗಗಳನ್ನು ವಶಕ್ಕೆ ಪಡೆದು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದೇವೆ‘‘ ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ ಏನು? : ಎರ್ರಂ ಅನುರಾಧ (55) ಎಂಬ ಮಹಿಳೆ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಹತ್ತು ವರ್ಷಗಳ ಹಿಂದೆ, ಕೊಲೆ ಆರೋಪಿಯ ತಂದೆ ಮೃತ ನರ್ಸ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು.. ಅಂದಿನಿಂದ ಆರೋಪಿ ಮತ್ತು ಅನುರಾಧ ನಡುವೆ ಪರಿಚಯವಾಯಿತು. ಇದೇ ಪರಿಚಯದ ಮೇಲೆ ಚೈತನ್ಯಪುರಿಯಲ್ಲಿರುವ ಆರೋಪಿ ಮನೆಯ ನೆಲ ಮಹಡಿಯಲ್ಲಿ ನರ್ಸ್‌ಗೆ ಕೊಠಡಿಯನ್ನು ಬಾಡಿಗೆಗೆ ನೀಡಿದ್ದರು.
ಸುಮಾರು ಎರಡು ವರ್ಷಗಳಿಂದ ಅನುರಾಧ ಅಲ್ಲಿ ವಾಸಿಸುತ್ತಿದ್ದರು. ಈ ಮಧ್ಯೆ ಆಕೆಯಿಂದ 7 ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದ ಚಂದ್ರಮೋಹನ್ ಆನ್ ಲೈನ್ ಟ್ರೇಡಿಂಗ್ನಲ್ಲಿ ಸಂಪೂರ್ಣ ಹಣ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದನು. ಇದಾದ ಬಳಿಕ ಅನುರಾಧ ಆಗಾಗ ಹಣವನ್ನು ಹಿಂತಿರುಗಿಸುವಂತೆ ಆರೋಪಿಗೆ ಕೇಳುತ್ತಿದ್ದರು. ಆದರೆ ಹಣ ಹಿಂತಿರುಗಿಸಲು ಸಾಧ್ಯವಾಗದ ಆರೋಪಿ ಅನುರಾಧಾಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ
ಅದರಂತೆ ಮೇ 12ರಂದು ಮಧ್ಯಾಹ್ನ ಸಮಯ ಆಕೆಯೊಂದಿಗೆ ಜಗಳವಾಡಿ ಕೊಲೆ ಮಾಡಿದ್ದ. ನಂತರ ಚಾಕು ಮತ್ತು ಟೈಲ್ ಕಟ್ಟರ್ನಿಂದ ದೇಹದ ಅಂಗಾಂಗಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದನು. ಮೃತದೇಹದಿಂದ ತಲೆಯನ್ನು ಬೇರ್ಪಡಿಸಿ ಆಟೋದಲ್ಲಿ ತಂದು ಮಲಕ್‌ಪೇಟ್ ಮೂಸಿ ನದಿ ಬಳಿ ಎಸೆದು ಪರಾರಿ ಆಗಿದ್ದನು. ಇನ್ನುಳಿದ ಕೆಲವು ಭಾಗಗಳನ್ನು ಬಕೆಟ್‌ನಲ್ಲಿ ತುಂಬಿ ಫ್ರಿಜ್‌ನಲ್ಲಿ ಬಚ್ಚಿಟ್ಟಿದ್ದನು.
ಕೊಲೆ ಮಾಡುವ ಮೊದಲೆ ಆರೋಪಿಯು ಮಹಿಳೆ ದೇಹದ ಭಾಗಗಳನ್ನು ನಾಶಪಡಿಸುವುದು ಹೇಗೆ ಎಂಬ ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದನು. ಬಳಿಕ ಅನುರಾಧಾ ಸಾವಿನ ವಿಚಾರ ಯಾರಿಗೂ ತಿಳಿಯಬಾರದು ಎಂದು ಆಕೆಯ ಫೋನ್ ಕೂಡ ಬಳಸಿದ್ದನು. ಈ ಎಲ್ಲಾ ಘಟನೆ ವಿವರವನ್ನು ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿರುವ ಬಗ್ಗೆ ಡಿಸಿಪಿ ರೂಪೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಸಂಸದರಿಂದ ಅಪ್ರಾಪ್ತ ಬಾಲಕಿಗೆ ಕಿರುಕುಳ ಆರೋಪ: ಎಫ್ಐಆರ್ನಲ್ಲಿ ತಾಯಿ ಹೆಸರು ಸೇರಿಸಿ ಎಡವಟ್ಟು ಮಾಡಿದ ಪೊಲೀಸರು!