ಕಟಕ್ (ಒಡಿಶಾ) : ಖ್ಯಾತ ಕವಿ ಜಯಂತ ಮಹಾಪಾತ್ರ ಒಡಿಶಾದ ಕಟಕ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿದ್ದು, ನ್ಯುಮೋನಿಯಾ ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾಪಾತ್ರ ಅವರು ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಮಗ ಸೇರಿದಂತೆ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಅಕ್ಟೋಬರ್ 22, 1928 ರಂದು ಕಟಕ್‌ನಲ್ಲಿ ಜನಿಸಿದ ಮಹಾಪಾತ್ರ ಅವರು ಇಂಗ್ಲಿಷ್ ಕಾವ್ಯಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಕವಿ ಎಂಬ ಹೆಗ್ಗಳಿಕೆ ಕೂಡಾ ಹೊಂದಿದ್ದಾರೆ. 2009 ರಲ್ಲಿ ಇವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಸಹ ನೀಡಿ ಗೌರವಿಸಿತ್ತು. ಆದರೆ, ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಪ್ರತಿಭಟಿಸಿ 2015 ರಲ್ಲಿ ಮಹಾಪಾತ್ರ ಅದನ್ನು ಹಿಂದಿರುಗಿಸಿದ್ದರು. ಆಧುನಿಕ ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾದ 'ಇಂಡಿಯನ್ ಸಮ್ಮರ್' ಮತ್ತು 'ಹಂಗರ್' ಕೃತಿಗಳನ್ನು ಬರೆದು ಜಯಂತ್ ಭಾರತದಲ್ಲಿ ಮನೆ ಮಾತಾಗಿದ್ದರು. ಅಷ್ಟೇ ಅಲ್ಲ ಕವಿ ಜಯಂತ ಮಹಾಪಾತ್ರ ಅವರು 27 ಕವನಗಳ ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಏಳು ಒಡಿಯಾ ಭಾಷೆಯಲ್ಲಿದ್ದರೆ, ಮತ್ತು ಉಳಿದವು ಇಂಗ್ಲಿಷ್‌ನಲ್ಲಿವೆ.
ಸಂತಾಪ ಸೂಚಿಸಿದ ಸಿಎಂ: ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಜಯಂತ ಮಹಾಪಾತ್ರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. "ಮಹಾಪಾತ್ರ ಅವರು ಇಂಗ್ಲಿಷ್ ಮತ್ತು ಒಡಿಯಾ ಸಾಹಿತ್ಯದ ಪ್ರತಿಭೆ ಆಗಿದ್ದಾರೆ. ಒಡಿಯಾ ಸಾಹಿತ್ಯದ ವ್ಯಾಪ್ತಿಯನ್ನು ಯಶಸ್ವಿಯಾಗಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರು ಯಶಸ್ವಿಯಾಗಿದ್ದರು , ಅವರ ಬುದ್ಧಿವಂತಿಕೆ ಮತ್ತು ಜ್ಞಾನವು ಅನೇಕ ಯುವಕರಿಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಮುಂದುವರಿಯಲು ಬೆಳವಣಿಗೆ ಕಾಣಲು ಹಾಗೂ ಅಂತಹ ಬರವಣಿಗೆಗೆ ಮಾರ್ಗದರ್ಶಕ ಆಗಿದೆ. ಮಹಾಪಾತ್ರ ಅವರ ಮಧುರವಾದ ಮಾತುಗಳು ಮಾನವ ಅಭಿವ್ಯಕ್ತಿಯ ಶಕ್ತಿಯನ್ನು ನಮಗೆ ನೆನಪಿಸುತ್ತವೆ. ದೈನಂದಿನ ಜೀವನದ ಕುರಿತಾದ ಅವರ ಬರಹಗಳ ಯಾವಾಗಲು ಸ್ಮರಣೀಯ" ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಿಎಂ ನವೀನ್ ಪಟ್ನಾಯಕ್ ಅಲ್ಲದೇ, ಬಹಳಷ್ಟು ಅವರ ಅಭಿಮಾನಿಗಳು, ಸಾಹಿತ್ಯ ಸಾರಸತ್ವ ಲೋಕದ ಗಣ್ಯರು ಮಹಾನ್ ಕವಿಯ ಅಗಲಿಕೆಗೆ ತಮ್ಮ ಸಂತಾಪಗಳನ್ನು ಸೂಚಿಸಿದ್ದಾರೆ.
(ಪಿಟಿಐ)
ಇದನ್ನೂ ಓದಿ : 100ಕ್ಕೂ ಹೆಚ್ಚು ಹಿಟ್ ಚಿತ್ರಗಳಿಗೆ ಹಾಡು ಬರೆದಿದ್ದ ಹಿರಿಯ ಸಾಹಿತಿ ದೇವ್ ಕೊಹ್ಲಿ ನಿಧನ