ತೆಹ್ರಿ (ಉತ್ತರಾಖಂಡ್): ವಾಹನವೊಂದು ಹೆದ್ದಾರಿಯಿಂದ ಕೆಳಗೆ ಜಾರಿ ಮನೆಯೊಂದರ ಛಾವಣಿಯ ಮೇಲೆ ಉರುಳಿ ಬಿದ್ದ ಘಟನೆ ಇಲ್ಲಿನ ತೆಹ್ರಿ ಜಿಲ್ಲೆಯ ಬಾಲಗಂಗಾ ತೆಹಸಿಲ್ ಪ್ರದೇಶದ ಛಟಿಯಾರ ಖವಾಡ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮನೆಯ ಮೇಲ್ಛಾವಣಿ ಮುರಿದಿದೆ. ಮನೆಯಲ್ಲಿದ್ದ 6 ಮಂದಿ ಅಚ್ಚರಿ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ವಾಹನದಲ್ಲಿ ಚಾಲಕ ಮಾತ್ರ ಇದ್ದು, ಆತನ ತಲೆಗೆ ಗಂಭೀರ ಗಾಯವಾಗಿದೆ.
ರಾಜ್ಯಾದ್ಯಂತ ಹೆದ್ದಾರಿಗಳು ಹದಗೆಟ್ಟಿವೆ. ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಲೋಕೋಪಯೋಗಿ ಇಲಾಖೆ ರಸ್ತೆಗಳ ದುರಸ್ತಿ ಕಾರ್ಯ ಮಾಡುತ್ತಿಲ್ಲ ಎಂದು ಅಲ್ಲಿನ ಜನರು ದೂರಿದ್ದಾರೆ.
ಛಟಿಯಾರ ಖವಾಡ ರಸ್ತೆಯನ್ನು ಸುತ್ತುವರಿದ ತಡೆಗೋಡೆಗಳು ಮುರಿದಿವೆ. ಹೆದ್ದಾರಿಯಲ್ಲೆಲ್ಲಿಯೂ ಸುರಕ್ಷತಾ ಸಿಬ್ಬಂದಿ ಇಲ್ಲ. ರಸ್ತೆಯ ತಡೆಗೋಡೆ ಹಾಳಾಗಿದ್ದರಿಂದಲೇ ಈ ಅಪಘಾತ ನಡೆದಿದೆ. ಕ್ರಾಸ್ ತಡೆಗೋಡೆಗಳನ್ನು ಅಳವಡಿಸುವಂತೆ ಹಲವು ಬಾರಿ ಒತ್ತಾಯಿಸಿದರೂ ಇಲಾಖೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳೀಯ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದಾರೆ. "ಶುಕ್ರವಾರ ತಡರಾತ್ರಿ ವಾಹನವೊಂದು ಹೆದ್ದಾರಿ ಮೇಲಿಂದ ಕೆಳಗೆ ಜಾರಿ ಮನೆಯ ಮೇಲೆ ಬಿದ್ದಿದೆ. ಮನೆಯ ನಿವಾಸಿಗಳಿಗೆ ಯಾವುದೇ ಗಾಯಗಳಾಗಿಲ್ಲ, ಸುರಕ್ಷಿತವಾಗಿದ್ದಾರೆ. ವಾಹನ ಚಾಲಕನ ತಲೆಗೆ ತೀವ್ರ ಗಾಯಗಳಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.