ವಿಜಯವಾಡ (ಆಂಧ್ರಪ್ರದೇಶ): ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಆರೋಪಿಯಾಗಿ ಆಂಧ್ರಪ್ರದೇಶ ಸಿಐಡಿ ಪೊಲೀಸರ ಬಂಧನದಲ್ಲಿರುವ ಮಾಜಿ ಸಿಎಂ, ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ಎಸಿಬಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅವರನ್ನು ರಾಜಮಂಡ್ರಿಯ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಪೊಲೀಸರು ಶನಿವಾರ ವಿಜಯವಾಡದ ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೌಶಲ್ಯಾಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ದುರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶನಿವಾರ ನಂದ್ಯಾಲದಲ್ಲಿ ಬಂಧಿಸಿತ್ತು. ಬಳಿಕ ಕುಂಚನಪಲ್ಲಿಯಲ್ಲಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಚೇರಿಯಲ್ಲಿ 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿತ್ತು.
ನಂತರ ವೈದ್ಯಕೀಯ ಪರೀಕ್ಷೆಗೆ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯಕೀಯ ಪರೀಕ್ಷೆಗಳ ನಂತರ ಭ್ರಷ್ಟಾಚಾರ ನಿಗ್ರಹ ದಳದ ನ್ಯಾಯಾಲಯಕ್ಕೆ ಬಿಗಿ ಭದ್ರತೆಯ ನಡುವೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಲು ಪೊಲೀಸರ ಮನವಿ ಮೇರೆಗೆ ಸೆಪ್ಟೆಂಬರ್ 22ರ ವರೆಗೆ ನಾಯ್ಡು ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
ಆಂಧ್ರಪ್ರದೇಶದಲ್ಲಿ 144 ಸೆಕ್ಷನ್ ಜಾರಿ: ಕೌಶಲಾಭಿವೃದ್ಧಿ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ಆಂಧ್ರಪ್ರದೇಶ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕೆಯಾಗಿ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಡಿಜಿಪಿ ರಾಜೇಂದ್ರನಾಥ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಪೊಲೀಸರ ಅನುಮತಿ ಇಲ್ಲದೆ ರ್ಯಾಲಿ, ಸಭೆ-ಸಮಾರಂಭ ನಡೆಸಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಮತ್ತೊಂದೆಡೆ, ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ತೆಲುಗು ದೇಶಂ ಪಕ್ಷ ಸೋಮವಾರ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದೆ.
ಚಂದ್ರಬಾಬು ಅವರನ್ನು ಕಸ್ಟಡಿ ನೀಡಲು ಕೋರಿ ಸಿಐಡಿ ಅಧಿಕಾರಿಗಳು ಎಸಿಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ನಾಳೆ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮಾಜಿ ಸಿಎಂ ನಾಯ್ಡು ಅವರನ್ನು ರಾಜಮಂಡ್ರಿ ಸೆಂಟ್ರಲ್ ಜೈಲಿಗೆ ವರ್ಗಾಯಿಸಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದರೆ, ಇತ್ತ ವಕೀಲರು ಅವರನ್ನು ಗೃಹಬಂಧನದಲ್ಲಿ ಇರಿಸಲು ಅವಕಾಶ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ಅದರ ಸಾಧ್ಯತೆಯ ಕುರಿತೂ ಚರ್ಚೆಗಳು ನಡೆಯುತ್ತಿವೆ.
ಪ್ರಕರಣವೇನು?: 2015ರಲ್ಲಿ ಆಂಧ್ರಪ್ರದೇಶ ಸರ್ಕಾರ ಯುವಕರಿಗೆ ಕೌಶಲ್ಯ ತರಬೇತಿ ನೀಡುವ 3,350 ಕೋಟಿ ರೂಪಾಯಿ ವೆಚ್ಚದ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಜರ್ಮನ್ ಕಂಪನಿಯ ಮೂಲಕ ಯುವಕರಿಗೆ ತರಬೇತಿ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಈ ಯೋಜನೆಯಲ್ಲಿ 240 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸುದೀರ್ಘ ವಿಚಾರಣೆಯ ಬಳಿಕ ಚಂದ್ರಬಾಬು ನಾಯ್ಡುರನ್ನು ACB ಕೋರ್ಟ್‌ಗೆ ಹಾಜರುಪಡಿಸಿದ ಆಂಧ್ರ ಪೊಲೀಸರು