ಚೆನ್ನೈ (ತಮಿಳುನಾಡು): ಮನೆಯಲ್ಲಿ ರಾತ್ರಿ ಮಲಗಿದ್ದಾಗ ಎಸಿ ಸ್ಫೋಟಗೊಂಡು ನವ ವಿವಾಹಿತನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 28 ವರ್ಷದ ಶ್ಯಾಮ್ ಎಂಬಾತನೇ ಮೃತ ದುರ್ದೈವಿ.
ಇಲ್ಲಿನ ಪೆರಂಬೂರ್ನ ಮನವಲನ್ ಬಡಾವಣೆಯ ನಿವಾಸಿಯಾದ ಶ್ಯಾಮ್ ತಮ್ಮ ಮನೆಯ ಕೆಳ ಮಹಡಿಯಲ್ಲಿ ರವಿವಾರ ಮಲಗಿದ್ದರು. ತಂದೆ ಪ್ರಭಾಕರನ್ ಮೇಲ್ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಆದರೆ, ರಾತ್ರಿ ಕೆಳ ಮಹಡಿಯಿಂದ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು ತಂದೆ ಕೆಳಗಡೆ ಓಡಿ ಬಂದಿದ್ದಾರೆ. ಆಗ ದಟ್ಟ ಹೊಗೆ ಆವರಿಸಿದ್ದನ್ನು ಕಂಡ ಪ್ರಭಾಕರನ್ ಬಾಗಿಲು ಮುರಿದು ಒಳಹೋಗಿ ನೋಡಿದರೆ, ಎಸಿ ಸ್ಫೋಟದಿಂದ ಮಗ ಶ್ಯಾಮ್ ಸುಟ್ಟು ಕರಕಲಾಗಿದ್ದರು.
ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶ್ಯಾಮ್ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಶ್ಯಾಮ್ಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ದುರ್ಘಟನೆ ನಡೆದ ದಿನ ಪತ್ನಿ ತವರು ಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಡುಗೆ ಮಾಡುತ್ತಲೇ ಕುದಿಯುವ ಗಂಜಿಗೆ ಬಿದ್ದ ವ್ಯಕ್ತಿ: ಸಿಸಿಟಿವಿಯಲ್ಲಿ ದಾರುಣ ದೃಶ್ಯ ಸೆರೆ