ಹೈದರಾಬಾದ್: ಹೆಚ್ಚಿನ ಬಡ್ಡಿಗೆ ಭರವಸೆ ನೀಡಿ ಜನರನ್ನು ವಂಚಿಸಿದ್ದಲ್ಲದೇ, 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಕೇರಳದ ತಿರುವನಂತಪುರಂ ಮೂಲದ ಟಿ.ಜೆ.ಜಾನ್ ತನ್ನ ಸ್ನೇಹಿತರಾದ ಟಿ.ಜೆ.ಮ್ಯಾಥ್ಯೂ, ಎಂ.ಎಂ.ಟೋಮಿ, ಶೆರ್ಲಿ ಟೋಮಿ, ಸಿಐ ಜೋಸೆಫ್ ಮತ್ತು ಒಟ್ಟು ಹತ್ತು ಮಂದಿ ಸೇರಿ ಹೈದರಾಬಾದ್‌ನಲ್ಲಿ 1986ರಲ್ಲಿ ‘ಟ್ರಾವಂಕೂರ್ ಫೈನಾನ್ಸ್ ಅಂಡ್ ಲೀಸಿಂಗ್ ಕಂಪನಿ’ ಎಂಬ ಕಂಪನಿ ಸ್ಥಾಪಿಸಿದ್ದರು.
ಇವರೆಲ್ಲ ಹೆಚ್ಚಿನ ಬಡ್ಡಿ ಆಮಿಷ ತೋರಿಸಿ, ಜನರಿಗೆ ಮೋಸ ಮಾಡಿ ತಲೆ ಮರೆಸಿಕೊಂಡಿದ್ದರು. ತಮ್ಮ ಬಳಿ ಠೇವಣಿ ಇಟ್ಟರೆ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂದು ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದ್ದರು. ಇವರ ಮರಳಿನ ಮಾತಿಗೆ ಎಷ್ಟೋ ಮಂದಿ ಅವರ ಬಳಿ ಠೇವಣಿ ಇಟ್ಟಿದ್ದರು. ಆಗಲೇ ಇವರು ಒಟ್ಟು 12,54,915 ರೂ. ಗಳನ್ನ ಜನರಿಂದ ಠೇವಣಿ ಇರಿಸಿಕೊಂಡಿದ್ದರು. ಅದರಲ್ಲಿ ಕೇವಲ ರೂ.94,921 ಮರುಪಾವತಿ ಮಾಡಿದ್ದರು.
ಜನರಿಂದ ಇರಿಸಿಕೊಂಡಿದ್ದ ಠೇವಣಿಗೆ ಇವರು ಬಡ್ಡಿ ಹಣ ಪಾವತಿಸದೇ ಉಳಿದ 11.50 ಲಕ್ಷ ರೂ.ಗಳನ್ನು ತಮ್ಮ ಖಾತೆಯಲ್ಲಿ ಇರಿಸಿಕೊಂಡಿದ್ದರು. ಈ ಸಂಬಂಧ 1987ರಲ್ಲಿ ಹೈದರಾಬಾದ್ ಸಿಸಿಎಸ್‌ನಲ್ಲಿ ಪ್ರಕರಣ ದಾಖಲಾಗಿತ್ತು. 1994ರ ಜನವರಿ 29ರಂದು ಎಂಎಂ ಟೋಮಿ, ಶೆರ್ಲಿ ಟೋಮಿ, ಸಿಐ ಜೋಸೆಫ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಆದೇಶದಂತೆ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದ ಇವರೆಲ್ಲ ಪರಾರಿಯಾಗಿದ್ದರು. ಅಂದಿನಿಂದ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಲ್ಲಿತ್ತು. ಆದರೆ ಆ ಬಳಿಕ ತನಿಖೆ ನಿಧಾನಗೊಂಡಿತ್ತು. ಹಾಗೂ ಆ ಪ್ರಕರಣ ಮರತೇ ಹೋಗಿತ್ತು ಎನ್ನುವಂತಾಗಿತ್ತು.
ಆದರೆ ಹಳೆಯ ಪ್ರಕರಣಗಳ ಪರಿಶೀಲನೆಯ ಭಾಗವಾಗಿ ಈ ವಿವರಗಳು ಬಹಿರಂಗವಾಗುತ್ತಿದ್ದಂತೆ ಅವರನ್ನು ಬಂಧಿಸಲು ಸಿಐಡಿ ಹೆಚ್ಚುವರಿ ಡಿಜಿ ಮಹೇಶ್ ಭಾಗವತ್ ನಿರ್ಧರಿಸಿದ್ದರು. ಈ ಪ್ರಕರಣದ ವಿಚಾರವಾಗಿ ಸಿಐಡಿ ಲಿಂಗಸ್ವಾಮಿ, ಎಸ್‌ಐ ರಮೇಶ್, ಹೆಡ್ ಕಾನ್‌ಸ್ಟೇಬಲ್ ಆನಂದ್ ಮತ್ತು ಮಹಿಳಾ ಕಾನ್‌ಸ್ಟೇಬಲ್ ಅನಿತಾ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವಿಶೇಷ ತಂಡ ಜನರಿಗೆ ವಂಚನೆ ಮಾಡಿ ತಪ್ಪಿಸಿಕೊಂಡವರಿಗಾಗಿ ತೀವ್ರ ಶೋಧ ನಡೆಸಿತ್ತು. ಕೇರಳಕ್ಕೆ ತೆರಳಿ ಶೆರ್ಲಿ ಟೋಮಿ (70) ಮತ್ತು ಸಿಐ ಜೋಸೆಫ್ (67) ಅವರನ್ನು ಬಂಧಿಸಿ ಹೈದರಾಬಾದ್‌ಗೆ ಕರೆತಂದಿದೆ. ನ್ಯಾಯಾಲಯದ ಆದೇಶದಂತೆ ಅವರನ್ನು ಜೈಲಿಗೆ ಕಳುಹಿಸಲಾಗಿದೆ. 41 ನೇ ವಯಸ್ಸಿನಲ್ಲಿ ತಲೆಮರೆಸಿಕೊಂಡಿದ್ದ ಶೆರ್ಲಿ ಟೊಮಿಯನ್ನು 70 ನೇ ವಯಸ್ಸಿನಲ್ಲಿ ಮತ್ತೆ ಬಂಧಿಸಲಾಯಿತು ಎಂಬುದು ಗಮನಾರ್ಹ.
ಅಂದರೆ ಸುಮಾರು 30 ವರ್ಷಗಳ ಹಿಂದಿನ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಹುಡುಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪೊಲೀಸ್ ಇಲಾಖೆ ಮೇಲೆ ಜನರಿಗೆ ನಂಬಿಕೆ ಬರುವಂತೆ ಮಾಡಿದೆ.
ಇದನ್ನು ಓದಿ: ಹಿಟ್ ಅಂಡ್ ಡ್ರ್ಯಾಗ್ ಪ್ರಕರಣ : ಬ್ಯಾನೆಟ್ಗೆ ಸಿಲುಕಿದ ರಿಕ್ಷಾ ಚಾಲಕ 200 ಮೀಟರ್ ವರೆಗೆ ಎಳೆದೊಯ್ದ ಕಾರ್