ಚೆನ್ನೈ: ಕೋವಿಡ್ ಎರಡನೇ ಅಲೆಯ ಈ ವೇಳೆಯಲ್ಲಿ ಸುಮಾರು 1,300 ಬ್ಯಾಂಕ್ ಸಿಬ್ಬಂದಿ ಮಹಾಮಾರಿಗೆ ಬಲಿಯಾಗಿದ್ದಾರೆಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ತಿಳಿಸಿದೆ.
2020 ರಿಂದ 2021ರ ಫೆಬ್ರವರಿಯ ವರೆಗೆ ಕೊರೊನಾ ಸೋಂಕಿಗೆ ತುತ್ತಾಗಿ 600 ಬ್ಯಾಂಕ್ ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಫೆಬ್ರವರಿಯಿಂದ ಮೇ ತಿಂಗಳೊಳಗಾಗಿ 1,300 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಎಐಬಿಇಎ ಮುಖ್ಯ ಕಾರ್ಯನಿರ್ವಾಹಕ ಸುನಿಲ್ ಮೆಹ್ತಾ ಅವರಿಗೆ ಬರೆದ ಪತ್ರದಲ್ಲಿ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಹೆಚ್.ವೆಂಕಟಾಚಲಂ ಮಾಹಿತಿ ನೀಡಿದ್ದಾರೆ.
"ಬ್ಯಾಂಕ್ ಉದ್ಯೋಗಿಗಳಿಗೆ ವ್ಯಾಕ್ಸಿನೇಷನ್ಗೆ ಆದ್ಯತೆ ನೀಡಬೇಕೆಂಬ ನಮ್ಮ ಕೂಗನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸಾಂಕ್ರಾಮಿಕದ ವೇಳೆ ಎಲ್ಲಾ ಅಪಾಯಗಳೊಂದಿಗೆ ಬ್ಯಾಂಕ್ ನೌಕರರು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ, ಜನರ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಅವರು ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ" ಎಂದು ವೆಂಕಟಾಚಲಂ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿಗೆ ಭಾರತದಲ್ಲಿ ಸಾವಿರ ವೈದ್ಯರು ಬಲಿ
ರಾಜ್ಯ ಸರ್ಕಾರಗಳು ನಿರ್ಬಂಧಿಸಿರುವ ಕರ್ಫ್ಯೂ, ಲಾಕ್ಡೌನ್, ಸಾರ್ವಜನಿಕ ಸಾರಿಗೆ ಸ್ಥಗಿತದಿಂದಾಗಿ ಬ್ಯಾಂಕ್ ನೌಕರರು ತಮ್ಮ ಶಾಖೆಗಳು ಹಾಗೂ ಕಚೇರಿಗಳಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಈ ವೇಳೆ ಸ್ಥಳೀಯ ಪೊಲೀಸರಿಂದ ಅವಮಾನ-ನಿಂದನೆಗಳಿಗೆ ಒಳಗಾಗುತ್ತಿದ್ದಾರೆ. ರಾಜ್ಯ ಸರ್ಕಾರಗಳು, ರಾಜ್ಯ ಮಟ್ಟದ ಬ್ಯಾಂಕ್ ಸಮಿತಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಬ್ಯಾಂಕ್ ಒಕ್ಕೂಟಗಳ ಅಭಿಪ್ರಾಯಗಳನ್ನು ಪಡೆಯುವುದು ಒಳಿತು ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್‌ನಿಂದ ಬಳಲುತ್ತಿರುವ ಬ್ಯಾಂಕ್ ನೌಕರರ ಸಂಖ್ಯೆ ಮತ್ತು ಬಲಿಯಾದವರ ಸಂಖ್ಯೆಯ ಬಗ್ಗೆ ವಾರಕ್ಕೊಮ್ಮೆ ಬುಲೆಟಿನ್ ಬಿಡುಗಡೆ ಮಾಡುವಂತೆ ವೆಂಕಟಾಚಲಂ ಎಐಬಿಎಗೆ ಒತ್ತಾಯಿಸಿದ್ದಾರೆ.