ಪಾಲಕ್ಕಾಡ್ (ಕೇರಳ) : ಕಾಡಾನೆ ಹಿಂಡಿನಿಂದ ಬೇರ್ಪಟ್ಟ ಮರಿಯಾನೆ 'ಕಣ್ಮಣಿ'ಗೆ ಮರು ಜೀವ ಸಿಕ್ಕಿದೆ. ಇಲ್ಲಿನ ಅಟ್ಟಪಾರಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗಿ ತಿರುಗುತ್ತಿದ್ದ ಆನೆಮರಿಯನ್ನು ಪಾಲಕ್ಕಾಡಿನ ಆನೆ ಶಿಬಿರಕ್ಕೆ ಕರೆತರಲಾಗಿತ್ತು. ಇಲ್ಲಿ ಆನೆ ಮರಿಗೆ ಪಶುವೈದ್ಯರು ಮತ್ತು ಅರಣ್ಯಾಧಿಕಾರಿಗಳು ಆರೈಕೆ ಮಾಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಇಲ್ಲಿನ ಅಟ್ಟಪಾರಿ ಅರಣ್ಯ ಪ್ರದೇಶದ ಕೂಚಿಕಡವ್ ಎಂಬಲ್ಲಿ ಕಾಡಾನೆ ಗುಂಪಿನಿಂದ ಮರಿ ಆನೆ ಬೇರ್ಪಟ್ಟಿತ್ತು. ಒಂಟಿಯಾಗಿದ್ದ ಮರಿಯಾನೆಯನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ವೇಳೆ, ಆನೆ ಮರಿಯ ಮೈ ತುಂಬಾ ಗಾಯಗಳಾಗಿದ್ದವು. ಬಳಿಕ ಆನೆ ಮರಿಯನ್ನು ಅಟ್ಟಪಾರಿ ಅರಣ್ಯ ಪ್ರದೇಶದಲ್ಲೇ ಇದ್ದು ಕಾಡಾನೆ ಹಿಂಡಿಗೆ ಸೇರಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ, ಅವರ ಪ್ರಯತ್ನ ವಿಫಲವಾಗಿತ್ತು.
ಅರಣ್ಯ ಅಧಿಕಾರಿಗಳು ಸತತ ಏಳು ದಿನಗಳ ಕಾಲ ಆನೆಮರಿಯನ್ನು ಕಾಡಾನೆ ಹಿಂಡಿಗೆ ಸೇರ್ಪಡೆ ಮಾಡಲು ಪ್ರಯತ್ನಿಸಿದರು. ಆದರೆ ಇವರ ಪ್ರಯತ್ನ ಸಫಲವಾಗದಿದ್ದಾಗ ಆನೆಮರಿಯನ್ನು ಸ್ಥಳದಲ್ಲೇ ಬಿಟ್ಟು ಬಂದರೆ ಬೇರೆ ಪ್ರಾಣಿಗಳ ದಾಳಿಗೀಡಾಗುವ ಸಾಧ್ಯತೆ ಇತ್ತು. ಅಲ್ಲದೆ ಆನೆ ಮರಿ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ಆನೆಮರಿಯನ್ನು ಅಟ್ಟಪಾರಿ ಅರಣ್ಯಪ್ರದೇಶದಿಂದ ನೇರವಾಗಿ ಪಾಲಕ್ಕಾಡಿನ ಆನೆ ಶಿಬಿರಕ್ಕೆ ತಂದಿದ್ದರು. ಬಳಿಕ ಇಲ್ಲಿ ಪಶುವೈದ್ಯರು ಮತ್ತು ಅರಣ್ಯ ಅಧಿಕಾರಿಗಳು ಆನೆ ಮರಿಗೆ ಆರೈಕೆ ಮಾಡಿದ್ದು, ಈಗ ಆನೆಮರಿ ಚೇತರಿಸಿಕೊಂಡಿದೆ. ಈ ಮರಿಗೆ ಕಣ್ಮಣಿ ಎಂದು ಹೆಸರಿಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲಕ್ಕಾಡ್ ಡಿಎಫ್ಓ ಕುರ್ರಾ ಶ್ರೀನಿವಾಸ್, ನಾವು ಅಟ್ಟಪಾಡಿಯ ಅರಣ್ಯ ಪ್ರದೇಶದಲ್ಲಿ ಕಳೆದ ತಿಂಗಳ ಆನೆ ಮರಿ ಪತ್ತೆ ಮಾಡಿದ್ದೆವು. ಆನೆ ಮರಿಯು ತನ್ನ ಕಾಡಾನೆ ಹಿಂಡಿನಿಂದ ಬೇರ್ಪಟ್ಟಿತ್ತು. ಇದನ್ನು ಮತ್ತೆ ಕಾಡಾನೆ ಹಿಂಡಿನೊಂದಿಗೆ ಸೇರ್ಪಡೆ ಮಾಡಲು ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ, ನಮ್ಮ ಪ್ರಯತ್ನ ವಿಫಲವಾಗಿತ್ತು.
ಬಳಿಕ ಇದನ್ನು ಪಾಲಕ್ಕಾಡ್ ಆನೆ ಶಿಬಿರಕ್ಕೆ ತಂದೆವು. ಇಲ್ಲಿನ ಪಶುವೈದ್ಯರಾದ ಡೇವಿಡ್ ಅಬ್ರಾಹಂ, ಫಾರೆಸ್ಟ್ ಗಾರ್ಡ್ಗಳು ಆರೈಕೆ ಮಾಡುತ್ತಿದ್ದಾರೆ. ಮೊದಲು ಆನೆಗೆ ಅರ್ಧ ಲೀಟರ್ ಹಾಲನ್ನು ನೀಡಲಾಗುತ್ತಿತ್ತು. ಇದೀಗ ಒಮ್ಮೆಗೇ 2ರಿಂದ 2.5 ಲೀಟರ್ ಹಾಲು ನೀಡಲಾಗುತ್ತಿದೆ. ಜೊತೆಗೆ ಆನೆ ಮರಿಯ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.
ಕಣ್ಮಣಿಯು ಜನಿಸಿದ ಕೆಲವೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡಿತ್ತು. ಬಳಿಕ ಈಕೆಯನ್ನು ಆನೆ ಶಿಬಿರದಲ್ಲಿನ ಶಾಂತಿ ಎಂಬವರು ಆರೈಕೆ ಮಾಡಿಕೊಂಡು ಬರುತ್ತಿದ್ದಾರೆ. ಕಣ್ಮಣಿ ದಿನಕ್ಕೆ ಕನಿಷ್ಠ 20 ಲೀಟರ್ ಹಾಲು ಕುಡಿಯುತ್ತದೆ ಎಂದು ಹೇಳಿದರು. ಈಗ ಆನೆಮರಿಯು ಆರೋಗ್ಯವಾಗಿದ್ದು, ಶಿಬಿರದಲ್ಲಿ ಅತ್ತಿಂದಿತ್ತು ಒಡಾಡುತ್ತಿದೆ.
ಇದನ್ನೂ ಓದಿ : ಅರ್ಜುನ ಆನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ : ಸಚಿವ ಈಶ್ವರ್ ಖಂಡ್ರೆ