ಚಂಡೀಗಢ(ಪಂಜಾಬ್): ಪಂಚರಾಜ್ಯ ಚುನಾವಣೆಗಳ ಪೈಕಿ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಹೊಸ ಇತಿಹಾಸ ಬರೆಯಿತು. ಈ ಫಲಿತಾಂಶ ಸಾಕಷ್ಟು ಕುತೂಹಲ ಮತ್ತು ಅಚ್ಚರಿಗೂ ಕಾರಣವಾಗಿದೆ. ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ವಿರುದ್ಧ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮೊಬೈಲ್ ರಿಪೇರಿ ಅಂಗಡಿ ಕೆಲಸಗಾರ ಗೆಲುವಿನ ನಗೆ ಬೀರಿದ್ದಾರೆ.
ಲಾಭ್ ಸಿಂಗ್ ಉಗೋಕೆ ಅವರ ತಂದೆ ಡ್ರೈವರ್ ಆಗಿದ್ದು, ತಾಯಿ ಸರ್ಕಾರಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಲಾಭ್ ಸಿಂಗ್ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. 2013ರಲ್ಲಿ ಆಮ್ ಆದ್ಮಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರಿದ್ದ ಭದೌಲ್ನ ಲಾಭ್ ಸಿಂಗ್ ಉಗೋಕೆ ಇದೀಗ ಹಾಲಿ ಸಿಎಂ ವಿರುದ್ಧ 37,558 ಸಾವಿರ ಮತಗಳ ಅಂತರದಿಂದ ಗೆದ್ದು ಸಂಭ್ರಮಿಸಿದ್ದಾರೆ. ಓರ್ವ ಸಾಮಾನ್ಯ ವ್ಯಕ್ತಿ ಯಾವ ರೀತಿಯ ಬದಲಾವಣೆ ತರಬಹುದು ಎಂಬುದಕ್ಕೆ ಇವರು ಸ್ಪಷ್ಟ ಉದಾಹರಣೆ.
ಇದನ್ನೂ ಓದಿ: ಅಪ್ಪನ ಸೋಲಿಗೆ ಸೇಡು ತೀರಿಸಿಕೊಂಡ ಹೆಣ್ಮಕ್ಕಳು: ಉತ್ತರಾಖಂಡ ಚುನಾವಣೆಯಲ್ಲಿ ಗೆದ್ದು ಇತಿಹಾಸ!
ಸಿದ್ದು ಮಣಿಸಿದ ಸ್ವಯಂಸೇವಕಿ: ಇನ್ನು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಆಮ್ ಆದ್ಮಿ ಪಕ್ಷದ ಜೀವನ್ ಜ್ಯೋತಿ ಕೌರ್ ವಿರುದ್ಧ ಪರಾಜಯ ಹೊಂದಿದ್ದಾರೆ. ಇವರು ಪಂಜಾಬ್ನಲ್ಲಿ ಸಾಮಾನ್ಯ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಚುನಾವಣಾ ಆಯೋಗದ ಪ್ರಕಾರ, ಜೀವನ್ ಜ್ಯೋತಿ 39,676 ಮತ ಪಡೆದುಕೊಂಡಿದ್ದರೆ, ಸಿಧು 32,929 ಮತಗಳನ್ನು ಪಡೆದು ಸೋಲು ಕಂಡರು.
117 ಕ್ಷೇತ್ರಗಳ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 92, ಕಾಂಗ್ರೆಸ್ 18, ಇತರೆ ಪಕ್ಷಗಳು 7 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.