ಚಂಡಿಘಡ್: ಪಂಜಾಬ್‌ನ 16ನೇ ವಿಧಾನ ಸಭೆಯ ಬಜೆಟ್ ಅಧಿವೇಶನ ಇಂದು ಆರಂಭವಾಗಲಿದೆ. ಸದನದಲ್ಲಿ ವಿರೋಧ ಪಕ್ಷದ ಸದಸ್ಯರ ಸಂಖ್ಯೆ ತೀರಾ ಕಡಿಮೆ ಇದ್ದರೂ ಆಮ್ ಆದ್ಮಿ ಪಕ್ಷದ ಈ ಬಜೆಟ್ನ ಅಧಿವೇಶನ ಕುತೂಹಲದಿಂದ ಕೂಡಿರಲಿದೆ.
ಪಂಜಾಬ್‌ನಲ್ಲಿ ಹೊಸದಾಗಿ ರಚನೆಯಾದ ಆಮ್ ಆದ್ಮಿ ಪಕ್ಷದ ಮೊದಲ ಬಜೆಟ್ ಇದಾಗಿದ್ದು, ಜೂನ್ 27 ರಂದು ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಲಾಗಿದೆ. ಜೂನ್ 28 ಮತ್ತು 29 ರಂದು ಬಜೆಟ್ ಮೇಲೆ ಚರ್ಚೆ ಇರಲಿದೆ. ಈ ನಿಟ್ಟಿನಲ್ಲಿ ವಿಧಾನ ಸಭೆಯ ಕಾರ್ಯದರ್ಶಿ ಈಗಾಗಲೇ ಅಧಿವೇಶನದ ಕಾರ್ಯಕ್ರಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಂಜಾಬ್‌ನ ಎಲ್ಲ 117 ಶಾಸಕರಿಗೆ ಈ ಕುರಿತು ತಿಳಿಸಲಾಗಿದೆ.
ಅಗಲಿದ ಆತ್ಮಗಳಿಗೆ ಶ್ರದ್ಧಾಂಜಲಿ: ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಅಧಿವೇಶನದ ಕಲಾಪ ಆರಂಭವಾಗಲಿದ್ದು, ಮೊದಲಿಗೆ ಅಗಲಿದ ಆತ್ಮಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲರ ಭಾಷಣದ ಜತೆಗೆ ಕೃತಜ್ಞತಾ ಕಾರ್ಯಕ್ರಮ ಜರುಗಲಿದೆ.
ಪಂಜಾಬ್ ಸಚಿವ ಸಂಪುಟ ಸಭೆ: ಹೊಸ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಒಂದು ವಾರದವರೆಗೆ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಪಂಜಾಬ್ ಮುಖ್ಯಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆಯಲಿದ್ದು, ಈ ಸಭೆಯ ಮಾರ್ಗ ಸೂಚಿಯನ್ನು ಪಂಜಾಬ್ ಸರ್ಕಾರವು ಸ್ಥಳದಲ್ಲೇ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಅದೇ ಸಮಯದಲ್ಲಿ ಬಜೆಟ್ ಅಧಿವೇಶನದ ನಂತರ ಪಂಜಾಬ್ ಸರ್ಕಾರ ತನ್ನ ಸಚಿವ ಸಂಪುಟವನ್ನು ವಿಸ್ತರಿಸಬಹುದು ಎಂದು ಹೇಳಲಾಗುತ್ತಿದೆ. ಬಜೆಟ್ ಅಧಿವೇಶನ ನೇರ ಪ್ರಸಾರವಾಗಲಿದ್ದು, ಪಂಜಾಬ್ ಸರ್ಕಾರದ ಅಧಿಕೃತ ವೆಬೆಸೈಟ್ನ ಖಾತೆಯಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ:ಶಾಸಕಾಂಗ ಪಕ್ಷದ ನಾಯಕ ಶಿಂಧೆ ಎಂದ ಬಂಡಾಯ ಶಾಸಕರು.. ಉಪ ಸ್ಪೀಕರ್ಗೆ ಪತ್ರ