ಡೆಹ್ರಾಡೂನ್: ಉತ್ತರಾಖಂಡದ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕರ್ನಲ್ ಅಜಯ್ ಕೊತಿಯಾಲ್ ಅವರು 25ಸಾವಿರ ಲಂಚ ನೀಡಿ ಸರ್ಕಾರಿ ಇಲಾಖೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.
ಅರೇ ಇದೇನಿದು ಸಿಎಂ ಅಭ್ಯರ್ಥಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿಕೊಳ್ತಾರಾ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮನೆಮಾಡಿರಬಹುದು. ಹೌದು, ಅವರು ಸೇರಿಕೊಂಡಿದ್ದೇನೋ ನಿಜ. ಆದರೆ, ಅದು ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯಲು.
ಚಂಪಾವತ್ ನ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಭದ್ರತಾ ಸಿಬ್ಬಂದಿಯ ಕೆಲಸವನ್ನು ಪಡೆದಿದ್ದಾರೆ ಅದು ಕೂಡ 25 ಸಾವಿರ ಲಂಚ ನೀಡಿ. ಈ ಲಂಚಾವತಾರದ ವಿಷಯವನ್ನು ಸರ್ಕಾರಕ್ಕೆ ಮುಟ್ಟಿಸಲು ಹಾಗೂ ಜನತೆಯನ್ನು ಎಚ್ಚರಿಸಲು ಅವರು ಈ ನಾಟಕವಾಡಿದ್ದಾರೆ.
ಸರ್ಕಾರದ ಮೂಗಿನ ಕೆಳಗೆ ಇಂತಹ ಕೃತ್ಯಗಳು ನಡೆಯುತ್ತಿವೆ. ಅರ್ಹ ಯುವಕರಿಗೆ ರಾಜ್ಯದಲ್ಲಿ ಉದ್ಯೋಗ ನೀಡುತ್ತಿಲ್ಲ. ಆದರೆ, ಹೊರಗುತ್ತಿಗೆ ಏಜೆನ್ಸಿಗಳು ಸಂಪೂರ್ಣ ನೇಮಕಾತಿಯ ನೀತಿ ನಿಯಮದ ಪ್ರಕ್ರಿಯೆಯನ್ನು ಮಾಡದೆ ಲಂಚ ತೆಗೆದುಕೊಳ್ಳುವ ಮೂಲಕ ಉದ್ಯೋಗಗಳನ್ನು ನೀಡುತ್ತಿವೆ. ಈ ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಮಾಜಿ ಸೈನಿಕರ ಕೋಟಾದ ಅಡಿ ಉದ್ಯೋಗಕ್ಕಾಗಿ ನಾನು ಅರ್ಜಿ ಸಲ್ಲಿಸಿದೆ. ಈ ಸಮಯದಲ್ಲಿ, ಸಂಪೂರ್ಣ ಪ್ರಕ್ರಿಯೆಯನ್ನು ಅನುಸರಿಸದೆ ಲಂಚ ಪಡೆಯುವ ಮೂಲಕ ನನಗೆ ಚಂಪಾವತ್‌ನಲ್ಲಿ ಕಾವಲುಗಾರನ ಕೆಲಸವನ್ನು ನೀಡಲಾಯಿತು ಎಂದು ಹೇಳಿದ್ದಾರೆ.
ನಾನು ಹಣವನ್ನು ನೀಡಿದ್ದಕ್ಕೆ ನನಗೆ ಕೆಲಸ ಸಿಕ್ಕಿತು. ನನಗೆ ಕೆಲಸ ನೀಡಿದ ಸರ್ಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಆದರೆ, ರಾಜ್ಯದಲ್ಲಿ ಉದ್ಯೋಗದ ಅಗತ್ಯವಿರುವ ಅನೇಕ ಯುವಕರು ಇದ್ದಾರೆ, ಸರ್ಕಾರವು ಅವರತ್ತ ಗಮನ ಹರಿಸುತ್ತಿಲ್ಲ ಎಂದು ವ್ಯಂಗ್ಯವಾಗೇ ಹರಿಹಾಯ್ದರು.
ಕರ್ನಲ್ ಅಜಯ್ ಕೊತಿಯಾಲ್ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರಾಖಂಡದಲ್ಲಿ ಸಿಎಂ ಅಭ್ಯರ್ಥಿಯಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಇತ್ತೀಚೆಗೆ ಘೋಷಿಸಿದ್ದಾರೆ.
ಈ ವಿಷಯವು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಇಲ್ಲಿಯವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ದೂರು ಸ್ವೀಕರಿಸಿದ ನಂತರ ವಿಚಾರಣೆ ನಡೆಸಲಾಗುವುದು. ತನಿಖೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಕ್ಕಳ ಅಭಿವೃದ್ಧಿ ಸಚಿವೆ ರೇಖಾ ಆರ್ಯ ತಿಳಿಸಿದ್ದಾರೆ.