ಲಖನೌ: ಆಮ್ ಆದ್ಮಿ ಪಕ್ಷದ ರಾಜ್ಯ ಉಸ್ತುವಾರಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 8 ಮಹಿಳೆಯರು ಸೇರಿ 150 ಮಂದಿಯ ಹೆಸರನ್ನು ಸೇರಿಸಲಾಗಿದೆ. ಮುಂದಿನ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ಕ್ಷೇತ್ರ ವಿಕಾಸ ಟ್ರಸ್ಟ್‌ನಲ್ಲಿ ನಡೆದ ಭೂ ಹಗರಣದಿಂದಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಸ್ಪರ್ಧಿಸದಿರಲು ನಿರ್ಧರಿಸಿ ಗೋರಖ್‌ಪುರಕ್ಕೆ ತೆರಳಿದ್ದಾರೆ ಎಂದು ಸಂಸದ ಸಂಜಯ್ ಸಿಂಗ್ ವ್ಯಂಗ್ಯವಾಡಿದ್ದು, ರಾಮ ಜನ್ಮಭೂಮಿ ಕ್ಷೇತ್ರ ಅಭಿವೃದ್ಧಿ ಟ್ರಸ್ಟ್‌ನ ದೇಣಿಗೆಯನ್ನು ಲೂಟಿ ಮಾಡಿದ ರೀತಿಗೆ ಅಯೋಧ್ಯೆಯ ಜನರು ತುಂಬಾ ಕೋಪಗೊಂಡಿದ್ದಾರೆ ಎಂದು ಅವರಿಗೆ ತಿಳಿದಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಬದಲಾವಣೆ ತರಲು ಮತ್ತು ರಾಜ್ಯದ ಕೊಳೆಯನ್ನು ಗುಡಿಸಲು ತಮ್ಮ ಪಕ್ಷವು 403 ಸ್ಥಾನಗಳಲ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಇದೇ ವೇಳೆ ಹೇಳಿದರು.
ಈ ಪಟ್ಟಿಯಲ್ಲಿ ವೈದ್ಯರು, ಎಂಜಿನಿಯರ್‌ಗಳು, ಎಂಬಿಎ, ಸ್ನಾತಕೋತ್ತರ ಪದವೀಧರರು, ಪದವಿ ಮತ್ತು ಡಿಪ್ಲೊಮಾ ಹೊಂದಿರುವವರು ವಿದ್ಯಾವಂತ ಅಭ್ಯರ್ಥಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.