ನವದೆಹಲಿ: ನೂತನ ರಾಷ್ಟ್ರಪತಿ ಆಯ್ಕೆಗೋಸ್ಕರ ನಾಡಿದ್ದು ಚುನಾವಣೆ ನಡೆಯಲಿದೆ. ಎನ್ಡಿಎ ಪಕ್ಷದ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಬೆಂಬಲಿತ ಅಭ್ಯರ್ಥಿ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ. ಈಗಾಗಲೇ ದೇಶದ ಬಹುತೇಕ ಪಕ್ಷಗಳು ತಮ್ಮ ತಮ್ಮ ಬೆಂಬಲ ಯಾರಿಗೆ ಎಂಬುದರ ಬಗ್ಗೆ ಘೋಷಣೆ ಮಾಡಿವೆ. ಇದೀಗ ದೆಹಲಿ ಹಾಗೂ ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಕೂಡ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಘೋಷಿಸಿದೆ.
ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ತಾವು ಯಶವಂತ್ ಸಿನ್ಹಾ ಅವರಿಗೆ ಬೆಂಬಲ ಘೋಷಿಸುವುದಾಗಿ ಹೇಳಿದ್ದಾರೆ. ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಚುನಾವಣೆಯಲ್ಲಿ ನಮ್ಮ ಬೆಂಬಲ ವಿಪಕ್ಷ ಅಭ್ಯರ್ಥಿಗೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗೆ ನಮ್ಮ ಮತ': ಮುರ್ಮುಗೆ ಜೆಡಿಎಸ್ ಬೆಂಬಲ ಘೋಷಣೆ
ಆಮ್ ಆದ್ಮಿ ಪಕ್ಷ ಒಟ್ಟು 10 ರಾಜ್ಯಸಭಾ ಸದಸ್ಯರನ್ನ ಹೊಂದಿದ್ದು, ದೆಹಲಿ, ಗೋವಾ ಮತ್ತು ಪಂಜಾಬ್ ಸೇರಿ ಒಟ್ಟು 156 ಶಾಸಕರು ಇದ್ದಾರೆ. ರಾಷ್ಟ್ರಪತಿ ಚುನಾವಣಾ ಕಣಕ್ಕಿಳಿದಿರುವ ದ್ರೌಪದಿ ಮುರ್ಮುಗೆ ಈಗಾಗಲೇ ಜೆಡಿಎಸ್, ಜಾರ್ಖಂಡ್ ಮುಕ್ತಿ ಮೋರ್ಚಾ, ಶಿವಸೇನೆ, ವೈಎಸ್ಆರ್ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಬೆಂಬಲ ಘೋಷಣೆ ಮಾಡಿವೆ. ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.