ಪುಣೆ (ಮಹಾರಾಷ್ಟ್ರ): ಆಧಾರ್ ಕಾಯ್ದೆಗೆ ತಿದ್ದುಪಡಿ ತರಬೇಕು ಮತ್ತು ಆಧಾರ್ ಕಾರ್ಡ್‌ನಿಂದ ವಂಚಿತರಾದವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಓಕಾ ಹೇಳಿದ್ದಾರೆ. ಟೆಲಿಕಾಂ ವಿವಾದಗಳ ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್‌ಎಟಿ) ಶನಿವಾರ ಪುಣೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ದೇಶಿಸಿ ಅವರು ಮಾತನಾಡಿದರು. ಸಂಕಿರಣದಲ್ಲಿ ಸಿಬಿಐನ ಉನ್ನತ ಅಧಿಕಾರಿಗಳು, ಪೊಲೀಸರು ಮತ್ತು ವಕೀಲರು ಭಾಗವಹಿಸಿದ್ದರು.
ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವನ್ನು ಸೂಚಿಸಿದ ನ್ಯಾಯಮೂರ್ತಿ ಓಕಾ, ಸುಶಿಕ್ಷಿತ ಜನಸಾಮಾನ್ಯರಲ್ಲಿ ಕಾನೂನು ಜ್ಞಾನದ ಕೊರತೆಯು ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ, ನಾನು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣಿಸುತ್ತಿದ್ದೆ ಮತ್ತು ಜನರೊಂದಿಗೆ ಸಂವಹನ ನಡೆಸುತ್ತಿದ್ದೆ. ಪ್ರಾಧಿಕಾರದ ಅಧಿಕಾರಗಳು ತುಂಬಾ ಸೀಮಿತವಾಗಿವೆ ಎಂದು ಈ ಹಿಂದೆ ನನಗೆ ಅನಿಸಿದೆ ಎಂದು ಅವರು ಹೇಳಿದರು.
2018 ರಲ್ಲಿ ಪುಣೆಯಲ್ಲಿ ಮಧ್ಯಸ್ಥಿಕೆ ಕಾರ್ಯಾಗಾರವೊಂದು ನಡೆದಿತ್ತು. ಆಗ ನಾನು ಹೈಕೋರ್ಟ್ ಕಾನೂನು ಸಮಿತಿಯ ಅಧ್ಯಕ್ಷನಾಗಿದ್ದೆ. ಅಂದು ಸೆಮಿನಾರ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ 75 ವರ್ಷದ ಮಹಿಳೆಯಿಂದ ಕರೆ ಬಂದಿತ್ತು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ದಿನಗಳಾಗಿದ್ದವು ಅವು ಎಂದು ನ್ಯಾಯಮೂರ್ತಿ ಓಕಾ ಸ್ಮರಿಸಿದರು.
ಆ ಮಹಿಳೆ ತಾನು ಪತಿಯನ್ನು ಕಳೆದುಕೊಂಡಿದ್ದು ಒಂಟಿಯಾಗಿ ವಾಸಿಸುತ್ತಿದ್ದೇನೆ ಎಂದು ಹೇಳಿದಳು. ಆರ್ಥಿಕವಾಗಿ ಶ್ರೀಮಂತಳಾಗಿದ್ದರೂ ಒಂದು ಕೈ ಕಳೆದುಕೊಂಡಿದ್ದರಿಂದ ವೀಲ್ ಚೇರ್ ಆಧಾರದಿಂದ ಬದುಕುತ್ತಿದ್ದಳು. ಆಕೆ ಆಧಾರ್ ಕಾರ್ಡ್ ಮಾಡಿಸುವ ಸಲುವಾಗಿ ಆಧಾರ್ ನೀಡುವ ಕೇಂದ್ರಕ್ಕೆ ಹೋಗಿದ್ದಳು. ಆದರೆ 10 ಬೆರಳಿನ ಇಂಪ್ರೆಶನ್ ಸಿಗದ ಕಾರಣ ಆಕೆಗೆ ಆಧಾರ್ ಕಾರ್ಡ್ ನೀಡಲಾಗಲ್ಲ ಎಂದಿದ್ದರು. ಹೀಗಾಗಿ ಅವಳು ನನಗೆ ಕರೆ ಮಾಡಿ, ಬ್ಯಾಂಕ್ ಖಾತೆಯನ್ನು ನಿರ್ವಹಿಸಲು ಸಾಧ್ಯವಾಗದ ಕಾರಣ ಸಹಾಯ ಕೇಳಿದ್ದಳು. ತಾನು ವಿಪರೀತ ಗೊಂದಲದಲ್ಲಿ ಇರುವುದಾಗಿ ಹೇಳಿದಳು. ನಂತರ ನಾನು ಕಾನೂನು ಪ್ರಾಧ್ಯಾಪಕರೊಬ್ಬರಿಗೆ ಕರೆ ಮಾಡಿ ಕರೆ ಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದೆ. ಕೆಲ ಜಾಣ ವಿದ್ಯಾರ್ಥಿಗಳ ಸಹಾಯದಿಂದ ಅವರು ತಮ್ಮ ಪ್ರಯತ್ನ ಮಾಡಿದರು. ಎರಡು ದಿನಗಳ ಪ್ರಯತ್ನದ ನಂತರ, ಅಧಿಕಾರಿಗಳು ಯಂತ್ರದೊಂದಿಗೆ ಮಹಿಳೆಯ ಮನೆಗೆ ಹೋಗಿ ಅವರಿಗೆ 7 ದಿನಗಳಲ್ಲಿ ಆಧಾರ್ ಕಾರ್ಡ್ ನೀಡಿದರು ಎಂದು ನ್ಯಾಯಮೂರ್ತಿ ಓಕಾ ಆಧಾರ್ ಕಾರ್ಡ್ ನೀಡುವಲ್ಲಿನ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಅಂಥದೇ ಮತ್ತೊಂದು ಘಟನೆಯನ್ನು ನೆನಪಿಸಿಕೊಂಡ ನ್ಯಾಯಮೂರ್ತಿ ಓಕಾ, ನಮ್ಮ ಕ್ಯಾಂಪ್ ದಿನಗಳಲ್ಲಿ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ, ನಾವು ಕೆಲ ನಾಗರಿಕರನ್ನು ಭೇಟಿಯಾಗಿದ್ದೆವು. ಆಗ ತಮಗೆ ಆಧಾರ್ ಕಾರ್ಡ್ ಸಿಗುತ್ತಿಲ್ಲ ಎಂದು ಅಲ್ಲಿನ ಜನ ಹೇಳಿದ್ದರು. ಆಧಾರ್ ಕಾಯ್ದೆಗೆ ತಿದ್ದುಪಡಿ ತರಬೇಕು ಮತ್ತು ಆಧಾರ್ ಕಾರ್ಡ್‌ನಿಂದ ವಂಚಿತರಾಗಿರುವ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕೆಂದು ಆಗ ನನಗೆ ಅನಿಸಿತ್ತು ಎಂದು ಅವರು ತಿಳಿಸಿದರು.
ಇದನ್ನೂ ಓದಿ: 5 ವರ್ಷಗಳ ನಂತರ ಕುಟುಂಬ ಸೇರಿದ ಯುವತಿ: ಸಹಾಯಕ್ಕೆ ಬಂತು ಆಧಾರ್ ಕಾರ್ಡ್