ಕರೀಂನಗರ(ತೆಲಂಗಾಣ): ಭಾರತ ಸ್ವಾತಂತ್ರ್ಯದ 75 ವರ್ಷಗಳ ಆಚರಣೆ ನಿಮಿತ್ತ 'ಆಜಾದಿ ಕಾ ಅಮೃತ ಮಹೋತ್ಸವ' ಆಚರಿಸಲಾಗ್ತಿದೆ. ಇದೀಗ ರಾಷ್ಟ್ರಗೀತೆಯ ಹಿರಿಮೆ ಜಗತ್ತಿಗೆ ಸಾರುವ ಪ್ರಯತ್ನ ಮಾಡಿರುವ ತೆಲಂಗಾಣದ ಯುವತಿ ಏಳು ಗಂಟೆಗಳಲ್ಲಿ ಬರೋಬ್ಬರಿ 75 ಸಲ ರಾಷ್ಟ್ರಗೀತೆ ಹಾಡುವ ಮೂಲಕ ವಿಶ್ವದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ದಾಖಲು ಮಾಡಿದ್ದಾರೆ.
ತೆಲಂಗಾಣದ ಕರೀಂನಗರ ಪಟ್ಟಣದ ಕೀರ್ತಿ ಕುಮಾರ್ ಮತ್ತು ದೇವಪಾಲ ದಂಪತಿಯ ಪುತ್ರಿ ಅರ್ಚನಾ ಈ ಸಾಧನೆ ಮಾಡಿದ್ದಾರೆ. ಖಾಸಗಿ ಕಾಲೇಜ್ನಲ್ಲಿ ಉಪ ಪ್ರಾಂಶುಪಾಲರಾಗಿ ಕೆಲಸ ಮಾಡ್ತಿರುವ ಅರ್ಚನಾ M.Sc ಹಾಗೂ M.Ed ವ್ಯಾಸಂಗ ಮುಗಿಸಿದ್ದಾರೆ.
ಬಾಲ್ಯದಿಂದಲೂ ರಾಷ್ಟ್ರಗೀತೆ ಹಾಡುತ್ತಿದ್ದ ಅರ್ಚನಾ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ತಪ್ಪದೇ ಜನಗಣ ಮನ ಹಾಡುತ್ತಿದ್ದರು.
ಭಾರತ ಸದ್ಯ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು, ಇದರ ಬೆನ್ನಲ್ಲೇ ಅರ್ಚನಾ ಈ ಸಾಧನೆ ಮಾಡಿದ್ದಾರೆ. ಇದೀಗ ಈ ರೆಕಾರ್ಡ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸೇರ್ಪಡೆಯಾಗಿದೆ. ಇದರ ಬೆನ್ನಲ್ಲೇ ಕರೀಂನಗರ ಪೊಲೀಸ್ ಕಮಿಷನರ್ ವಿ. ಸತ್ಯನಾರಾಯಣ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ಯಾಮಲಾಲ್ ಪ್ರಸಾದ್ ಮತ್ತು ಮಾಜಿ ಮೇಯರ್ ಸರ್ದಾರ್ ರವೀಂದರ್ ಸಿಂಗ್ ಸನ್ಮಾನಿಸಿದ್ದಾರೆ.
ರಾಷ್ಟ್ರಗೀತೆ ಐದು ಚರಣಗಳಲ್ಲಿದ್ದು, ಪ್ರತಿ ಚರಣ ಹಾಡಲು 52 ಸೆಕೆಂಡು ತೆಗೆದುಕೊಳ್ಳಬೇಕು. ಒಟ್ಟು 5 ಚರಣ 75 ಬಾರಿ ಹಾಡಲು ಅರ್ಚನಾ 7 ಗಂಟೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿರಿ: ಎಲೆ ಮೇಲೆ ಅರಳಿದ ರಾಷ್ಟ್ರಗೀತೆ: 'ಇಂಡಿಯಾ ಬುಕ್ ಆಫ್ ರೆಕಾರ್ಡ್’ ದಾಖಲೆ ಮಾಡಿದ ರೈತನ ಮಗಳು
ಜನ ಗಣ ಮನ ಮೂಲತಃ ಬಂಗಾಳಿ ಭಾಷೆಯಲ್ಲಿದ್ದು, ಕವಿ ರವೀಂದ್ರನಾಥ್ ಟ್ಯಾಗೋರ್ ಬರೆದ ಭರೋತೋ ಭಾಗ್ಯೋ ಬಿಧಾತ್ ಹಾಡಿನ ರೂಪಾಂತರವಾಗಿದೆ. ಈ ಹಾಡಿನಲ್ಲಿ ಭಾರತದ ಸಂಸ್ಕೃತಿ, ಮೌಲ್ಯ ಮತ್ತು ಸ್ವಾತಂತ್ರ್ಯ ಹೋರಾಟ ಪ್ರತಿಬಿಂಬಿಸುವ ಐದು ಚರಣಗಳಿವೆ. 1911, ಡಿಸೆಂಬರ್ 27ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡೆಸಿದ ಕಲ್ಕತ್ತಾ ಅಧಿವೇಶನದ ಎರಡನೇ ದಿನ ಟ್ಯಾಗೋರ್ ಇದನ್ನ ಸಾರ್ವಜನಿಕವಾಗಿ ಹಾಡಿದ್ದರು.