ಬದಾಯು(ಉತ್ತರಪ್ರದೇಶ): ಬಾಜಿ ಕಟ್ಟುವುದು ಅಕ್ರಮ. ಅದು ಪ್ರಾಣಕ್ಕೇ ಕುತ್ತು ತರುತ್ತೆ. ಇದನ್ನು ಲೆಕ್ಕಿಸದ ಉತ್ತರಪ್ರದೇಶದ ಯುವಕ ಸ್ನೇಹಿತರೊಂದಿಗೆ ದುಸ್ಸಾಹಕ್ಕೆ ಕೈಹಾಕಿ ಪ್ರಾಣ ಕಳೆದುಕೊಂಡಿದ್ದಾನೆ. ಜೀವನಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಈಗ ಕಣ್ಣೀರು ಹಾಕುತ್ತಿದೆ.
ಏನಾಯ್ತು?: ಉತ್ತರಪ್ರದೇಶದ ಬದಾಯು ಜಿಲ್ಲೆಯ ಸೈದ್ಪುರ ಗ್ರಾಮದಲ್ಲಿ ಕೆಲ ಯುವಕರು ಊರಿನ ಕೆರೆಯ ದಡದಲ್ಲಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುತ್ತಿದ್ದರು. ಮುಂಬೈನಲ್ಲಿ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ದಿಲ್ಷನ್ ಕೂಡ ಈ ವೇಳೆ ಕೆರೆಯ ದಡದಲ್ಲಿದ್ದ. ಸ್ನೇಹಿತರ ಮಧ್ಯೆ ಕೆರೆಯನ್ನು ಈಜಿ ದಾಟುವ ಬಗ್ಗೆ ಪ್ರಸ್ತಾಪವಾಗಿದೆ. ಅದರಂತೆ ದಿಲ್ಷನ್ ತಾನು ಈಜುವುದಾಗಿ ಬಾಜಿಗೆ ಮುಂದಾಗಿದ್ದಾನೆ.
ಬೆಟ್ಟಿಂಗ್ ಗೆಲ್ಲಲು ದಿಲ್ಷನ್ ಕೆರೆಗೆ ಧುಮುಕಿದ್ದಾನೆ. ಕೆರೆಯ ವಿಸ್ತೀರ್ಣ ದೊಡ್ಡದಿದ್ದ ಕಾರಣ ಈಜಲಾಗದೇ ಅರ್ಧದಲ್ಲೇ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಕಂಡ ಸ್ನೇಹಿತರು ರಕ್ಷಿಸಲು ಪ್ರಯತ್ನಿಸಿದರೂ, ಅದು ಫಲ ಕಂಡಿಲ್ಲ. ಬಳಿಕ ಆತನ ಸಹೋದರ ತಕ್ಷಣವೇ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ಈಜುಗಾರರನ್ನು ಕರೆಸಿ ಶೋಧ ನಡೆಸಿದಾಗ ಯುವಕನ ಶವ ಪತ್ತೆಯಾಗಿದೆ.
ಓದಿ: ಸಿಬಿಐ ದಾಳಿ: ಲಂಚ ಪ್ರಕರಣದಲ್ಲಿ ಐಡಿಎಎಸ್ ಅಧಿಕಾರಿ ಸೇರಿ 6 ಮಂದಿ ಬಂಧನ