ಗುಂಟೂರು( ಆಂಧ್ರಪ್ರದೇಶ) : ದೈಹಿಕ ಅಸಾಮರ್ಥ್ಯದಿಂದ ಜನಿಸಿದ ಅವರು ತಮ್ಮ ಮದುವೆಯನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಆದರೆ ಕೊನೆಗೂ ಅವರ ಕನಸು ಅದ್ಧೂರಿಯಾಗಿ ನನಸಾಗಿದೆ.

ಸಾಮಾನ್ಯವಾಗಿ ವಿಕಲಚೇತನರು ಸಮಾಜದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಅದರಲ್ಲಿ ಪ್ರಮುಖವಾಗಿ ಸೂಕ್ತವಾದ ಜೀವನ ಸಂಗಾತಿ ಹುಡುಕುವುದು ಒಂದು ದೊಡ್ಡ ಸವಾಲು. ಆದರೆ, ವಿವಾಹ ಇನ್ಫೋ ಸೊಸೈಟಿ ಫಾರ್ ಡಿಸೇಬಲ್ಡ್ ಈ ಸವಾಲನ್ನು ಮುರಿದು ಜೋಡಿಗಳನ್ನು ಒಂದು ಮಾಡುತ್ತಾ ಬರುತ್ತಿದೆ.
ವಿವಾಹ ಇನ್ಫೋ ಸೊಸೈಟಿ ಇತ್ತೀಚೆಗೆ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಜೋಡಿಗಳು ಹೆಚ್ಚು ಆಡಂಬರವಿಲ್ಲದೇ ಸಾಂಪ್ರದಾಯಿಕ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಂಡು ಹೊಸ ಜೀವನ ಆರಂಭಿಸಿದ್ದಾರೆ. ಹಾಗೇ ಯಾವುದೇ ರೀತಿಯ ಕಾನೂನು ತೊಂದರೆಗಳಿಲ್ಲದೇ ಮದುವೆಗಳನ್ನು ನೋಂದಾಯಿಸಲಾಗಿದೆ. ಸಮಾರಂಭದಲ್ಲಿ ದಂಪತಿಗಳ ಕುಟುಂಬದವರು ಮತ್ತು ಹತ್ತಿರದ ಬಂಧುಗಳು ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದ್ದಾರೆ.

ಪ್ರಮುಖ ವಿಷಯ ಎಂದರೆ ಇಲ್ಲಿ ಕೆಲವು ವಿಶೇಷ ಚೇತನರು ಈ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡ ನಂತರ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಮಾನವೀಯ ಮೌಲ್ಯದ ಜೊತೆ ತಮಗೆ ಬೇಕಾದ ಸಂಗಾತಿ ಆರಿಸಿಕೊಂಡು ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಸಮರ್ಥ ಕುಮಾರ್ ಎಂಬ ಯುವಕ ಹುಟ್ಟಿನಿಂದಲೇ ವಿಕಲಚೇತನೆಯಾದ ವಿಜಯಲಕ್ಷ್ಮಿಯೊಂದಿಗೆ ಸಂತಸದಿಂದ ಪ್ರತಿಜ್ಞೆ ವಿನಿಮಯ ಮಾಡಿಕೊಂಡಿದ್ದಾರೆ. ಗುಂಟೂರಿನ ನಾಗಶ್ರೀ ಎಂಬುವರು ಅಂಗವಿಕಲರಿಗಾಗಿ ವಿವಾಹ ಮಾಹಿತಿ ಸೊಸೈಟಿಯನ್ನು ಸ್ಥಾಪಿಸಿದ್ದು, ಈ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ.

ಈ ವೇದಿಕೆಯಲ್ಲಿ ವಿವಿಧ ಜಿಲ್ಲೆಗಳ ವಧು - ವರರು ಪರಸ್ಪರ ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೊಬ್ಬರು ಪರಿಚಯವಾದ ನಂತರ ಮದುವೆಯಾಗಲು ಬಯಸಿದರೆ, ಸೊಸೈಟಿ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ವಿವಾಹ ಮಾಹಿತಿಯ ಸಂಘಟಕರು ದಂಪತಿಗಳ ಕುಟುಂಬ ಸದಸ್ಯರನ್ನು ಮನವೊಲಿಸಲು ಪ್ರಮುಖ ಕೆಲಸ ಮಾಡುತ್ತಾರೆ. ಇನ್ನು ಮದುವೆಯ ನಂತರವೂ ಒಂದು ವರ್ಷದವರೆಗೆ ಸೊಸೈಟಿ ದಂಪತಿಗೆ ಬೆಂಬಲ ನೀಡಲಿದೆ ಎನ್ನುತ್ತಾರೆ ನಾಗಶ್ರೀ ತಿಳಿಸಿದ್ದಾರೆ.

ವಿವಾಹ ಮಾಹಿತಿ ಮೂಲಕ ನಾಗಶ್ರೀ ಇದುವರೆಗೆ 53 ಜೋಡಿಗಳನ್ನು ಒಂದು ಮಾಡಿದ್ದಾರೆ. ಗುಂಟೂರಿನ ಗಂಗನಮ್ಮ ಸಮುದಾಯ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಮೂರು ಜೋಡಿಗಳು ನೂತನ ಜೀವನಕ್ಕೆ ಕಾಲಿರಿಸಿದ್ದಾರೆ. ನಾಗಶ್ರೀ ಅವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.