ರಾಜ್‌ಕೋಟ್ : ತಮ್ಮ ಕಂಠಸಿರಿಯಿಂದ ಸಂಗೀತ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದ ಭಾರತರತ್ನ ಲತಾ ಮಂಗೇಶ್ಕರ್ ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರು ಹಾಡಿದ ಸಾವಿರಾರು ಹಾಡುಗಳು ಈಗಲು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಲತಾ ಮಂಗೇಶ್ಕರ್ ದೇಶ- ವಿದೇಶದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೆಯೇ, ಸಾವಿರಾರು ಶಿಷ್ಯರನ್ನು ಸಹ ಹೊಂದಿದ್ದಾರೆ.
ಲತಾ ಅವರು ಗುಜರಾತ್‌ನ ರಾಜ್‌ಕೋಟ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ರಾಜ್‌ಕೋಟ್‌ನ ಅನೇಕ ಉದಯೋನ್ಮುಖ ಮತ್ತು ಹೆಸರಾಂತ ಗಾಯಕರು ಲತಾ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು.
ಈಗ ಲತಾ ಅವರ ಸಾವಿನಿಂದ ಎಲ್ಲರೂ ದುಃಖಿತರಾಗಿದ್ದಾರೆ. ಹಾಗೆಯೇ, ಲತಾ ಜೀ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ರಾಜ್‌ಕೋಟ್‌ನ ಗಾಯಕರೊಬ್ಬರು ಲತಾ ಮಂಗೇಶ್ಕರ್ ನೆನಪಿಗಾಗಿ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದ್ದಾರೆ.
ರಾಜಕೋಟ್ ನಿವಾಸಿ ಭೂಪೇಂದ್ರ ಅವರು ಲತಾ ಮಂಗೇಶ್ಕರ್ ದೇವಸ್ಥಾನವನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಈ ದೇವಸ್ಥಾನವನ್ನ ನಿರ್ಮಿಸುವ ಮೂಲಕ ಲತಾ ಮಂಗೆಶ್ಕರ್ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಮುಂದಿನ ಆರು ತಿಂಗಳಲ್ಲಿ ದೇವಾಲಯವನ್ನು ನಿರ್ಮಿಸಿ ಅದರಲ್ಲಿ ಅವರ ಪ್ರತಿಮೆಯನ್ನು ಸಹ ಸ್ಥಾಪಿಸುತ್ತಾರಂತೆ.
ಭೂಪೇಂದ್ರ ವಾಸವಾಡ, ಲತಾ ಜೀ ಅವರೊಂದಿಗಿನ ತನ್ನ ಮೊದಲ ಭೇಟಿಯನ್ನು ವಿವರಿಸಿದ್ದಾರೆ. "ನಾನು 1954ರಲ್ಲಿ ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಸುಗಮ ಸಂಗೀತದಲ್ಲಿ ಭಾಗವಹಿಸಿದ್ದೆ. ಆ ಸಮಯದಲ್ಲಿ ಲತಾ ದೀದಿ ಬಂದಿದ್ದರು ಮತ್ತು ಅವರ ಜೊತೆ ಹಾಡಲು ನನಗೆ ಅವಕಾಶ ಸಿಕ್ಕಿತು. ಆಗ ನನಗೆ 12 ವರ್ಷ. ಅವರು ನನ್ನ ಹಾಡು ಇಷ್ಟಪಟ್ಟರು, ನಂತರ ಅವರು ನನ್ನನ್ನು ಕರೆದು ಮತ್ತೊಂದು ಹಾಡನ್ನು ಹಾಡುವಂತೆ ಹೇಳಿದ್ದರು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ: ನಟ ಶಾರೂಖ್ ಖಾನ್ ದುವಾ ವಿವಾದ..ಗಾಳಿಯಲ್ಲಿ ಊದಿ ಪ್ರಾರ್ಥಿಸಿದ್ದು ಎಂದ ಊರ್ಮಿಳಾ ಮಾತೋಡ್ಕರ್