ಜೈಪುರ (ರಾಜಸ್ಥಾನ): ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಕುಲ್ಧರ ಗ್ರಾಮವು ವರ್ಷಗಳಿಂದ ನಿರ್ಜನವಾಗಿದೆ. ಮಾನವ ಸಮುದಾಯ ಇಲ್ಲಿ ವಾಸವಾಗಿತ್ತು ಎಂಬ ಕುರುಹುಗಳು ಮಾತ್ರ ಈಗ ಕಾಣಸಿಗುತ್ತವೆ.
ಕುಲ್ಧರ ಸಿಂಧೂ ಕಣಿವೆ ನಾಗರಿಕತೆಯ ಜೀವಂತ ಉದಾಹರಣೆ. ಇದರ ವಾಸ್ತುಶಿಲ್ಪ ವಿಶಿಷ್ಟವಾಗಿದ್ದು, ಬೀದಿಗಳು ಉತ್ತರದಿಂದ ದಕ್ಷಿಣಕ್ಕಿವೆ. ಏಕೆಂದರೆ ಜೈಸಲ್ಮೇರ್ನಲ್ಲಿ ಚಳಿಗಾಲದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ಬೇಸಿಗೆಯಲ್ಲಿ ದಕ್ಷಿಣದಿಂದ ಉತ್ತರಕ್ಕೆ ಗಾಳಿ ಬೀಸುತ್ತದೆ. ಅಲ್ಲದೆ ಈ ಗ್ರಾಮವನ್ನು ಪಾಲಿವಾಲ್ ಬ್ರಾಹ್ಮಣರು ಈ ಸ್ಥಾಪಿಸಿದ್ದರು ಎನ್ನಲಾಗುತ್ತದೆ.
ಗ್ರಾಮವನ್ನು ಸ್ಥಾಪಿಸಿದ ವ್ಯಕ್ತಿಯ ಹೆಸರಿನಲ್ಲಿ ಗ್ರಾಮಗಳನ್ನು ಕರೆಯಲಾಯಿತು. ಕುಲ್ಧರ ಗ್ರಾಮವನ್ನು ಕುಲ್ಧರ್ ಸ್ಥಾಪಿಸಿದರು. ಅದರಲ್ಲಿ ಇತರ ಜಾತಿಯ ಜನರು ಕೂಡ ಇದ್ದರು. 84 ಗ್ರಾಮಗಳು ಪಾಲಿವಾಲ್ಸ್ ಹೆಸರಿನಲ್ಲಿವೆ. ಅಚ್ಚರಿಯ ಸಂಗತಿ ಎಂದರೆ, ಒಂದೇ ರಾತ್ರಿಯಲ್ಲಿ ಕುಲ್ಧರ ಸೇರಿದಂತೆ 84 ಗ್ರಾಮಗಳನ್ನು ಖಾಲಿ ಮಾಡಲಾಯಿತು.
ಏಕೆಂದರೆ ಈ ನೆಲೆ ಆಳುತ್ತಿದ್ದ ರಾಜರ ಆಸ್ಥಾನದಲ್ಲಿದ್ದ ದಿವಾನ್ ಸಲಾಮ್ ಸಿಂಗ್ ತುಂಬಾ ಕ್ರೂರಿಯಾಗಿದ್ದ, ಜೊತೆಗೆ ನಿರಂಕುಶಾಧಿಕಾರಿಯಾಗಿದ್ದ. ಈ ನಡುವೆಯೇ ಜೈಸಲ್ಮೇರ್ ಮತ್ತು ಬಿಕಾನೆರ್ ನಡುವೆ ಯುದ್ಧ ನಡೆದಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ನಂತರ ಆರ್ಥಿಕ ಬಿಕ್ಕಟ್ಟು ಸಹ ಈ ಗ್ರಾಮಕ್ಕೆ ಶಾಪವಾಗಿ ಎದುರಾಗಿತ್ತು. ಸಲಾಮ್ ಸಿಂಗ್ ಪಾಲಿವಾಲ್ಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಯುದ್ಧದಲ್ಲಿಯೂ ಪ್ರಾಣ ಮತ್ತು ಆಸ್ತಿಪಾಸ್ತಿ ನಷ್ಟವಾಗಿತ್ತು.
ಹೀಗಾಗಿ ಇಡೀ ಗ್ರಾಮಸ್ಥರು ಸೇರಿ ಒಂದೇ ದಿನ ಗ್ರಾಮವನ್ನು ತೊರೆಯುವುದು ಉತ್ತಮ ಎಂದು ನಿರ್ಧರಿಸಿದ್ದರು. ಜೈಸಲ್ಮೇರ್ ರಾಜಪ್ರಭುತ್ವದಲ್ಲಿ ನಾವು ವಾಸಿಸಬೇಕಾಗಿಲ್ಲ ಎಂದು ಸಂಜೆಯ ಹೊತ್ತಿಗೆ 84 ಹಳ್ಳಿಗಳಿಗೆ ಈ ಸಂದೇಶ ಕಳುಹಿಸಿ ಅಲ್ಲಿಂದ ರಾತ್ರೋರಾತ್ರಿ ಹೊರನಡೆದರು. ಆದರೆ ಹೀಗೆ ಹೊರಹೋಗುವ ಮುನ್ನ ಈ ಜನ ಗ್ರಾಮಕ್ಕೆ ಶಾಪ ಹಾಕಿದ್ದರಂತೆ. ಹೀಗಾಗಿ ಇಂದಿಗೂ ಈ ಸ್ಥಳದಲ್ಲಿ ಯಾರೊಬ್ಬರೂ ನೆಲೆ ನಿಲ್ಲಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಇಲ್ಲಿನ ಹಿರಿಯರು.