ಹಿಮಾಚಲ ಪ್ರದೇಶ: ದೇಶದ ಸ್ವಚ್ಛ ನಗರ ಎಂದ ಕೂಡಲೇ ಹತ್ತು ಹಲವು ನಗರಗಳು ನಿಮ್ಮ ಕಣ್ಣ ಮುಂದೆ ಬರಬಹುದು. ಆದ್ರೆ ಹಿಮಾಚಲ ಪ್ರದೇಶದ ಈ ಒಂದು ಗ್ರಾಮ ಸ್ವಚ್ಛತೆಯಲ್ಲಿ ದೇಶದ ಬೇರೆಲ್ಲ ಗ್ರಾಮಗಳಿಗೂ ಮಾದರಿಯಾಗಿದ್ದು, ಸ್ವಚ್ಛ ಭಾರತ ಅಭಿಯಾನ ಯಶಸ್ವಿಗೊಳಿಸಿರುವ ಜೀವಂತ ಉದಾಹರಣೆಯಾಗಿದೆ. ರಾಷ್ಟ್ರಪತಿಯಿಂದ ಪುರಸ್ಕರಿಸಲ್ಪಟ್ಟ ಬೆಟ್ಟಗಳ ತಪ್ಪಿಲಿನ ಗ್ರಾಮವೇ ಈ ರಕಛಮ್. ಆದ್ರೆ ಈ ಗ್ರಾಮ ಬೆಂಕಿಯಲ್ಲಿ ಬೆಂದು ಮತ್ತೆ ಪುನರ್ ನಿರ್ಮಾಣವಾದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.
ಗ್ರಾಮಸ್ಥರು ಹೇಳುವ ಪ್ರಕಾರ ಇಡೀ ಗ್ರಾಮವೇ ಬೆಂಕಿಯಲ್ಲಿ ನಾಶವಾಗಿತ್ತಂತೆ. ಬಳಿಕ ಗ್ರಾಮಸ್ಥರೇ ಸೇರಿಕೊಂಡು ಗ್ರಾಮದ ಪುನರ್ ನಿರ್ಮಾಣಕ್ಕೆ ಪಣತೊಟ್ಟರಂತೆ. ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚಿ, ಸುಮಾರು ಒಂದೂವರೆ ವರ್ಷಗಳ ನಂತರ ಗ್ರಾಮವನ್ನು ಪುನರ್ ನಿರ್ಮಾಣ ಮಾಡಿದ್ದಾರೆ. ಈ ಘಟನೆಯ ಬಳಿಕ ಗ್ರಾಮಸ್ಥರೇ ನಿಯಮಗಳನ್ನು ಹಾಕಿಕೊಂಡಿದ್ದಾರಂತೆ. ಅದರಂತೆ ಪ್ರತಿಯೊಬ್ಬರೂ ಚಾಚು ತಪ್ಪದೇ ಪ್ರತಿ ನಿಯಮಗಳ ಪಾಲಿಸುವುದು ಕಡ್ಡಾಯ ಮಾಡಿದರಂತೆ.
ಈ ಗ್ರಾಮವು ಸ್ವಚ್ಛತೆ ವಿಚಾರದಲ್ಲಿ ಹಿಮಾಲಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ರಾಷ್ಟ್ರಮಟ್ಟದಲ್ಲೂ ಚಾಪು ಮೂಡಿಸಿದೆ. ಎಲ್ಲಿಯೂ ಕಸ ಹಾಗೂ ಕೊಳಚೆ ಕಂಡು ಬರದ ಕಾರಣ ಸ್ವಚ್ಛತೆಗಾಗಿ ರಾಷ್ಟ್ರಪತಿ ಅವರಿಂದ ಗೌರವ ಪಡೆದುಕೊಂಡಿದೆ.
ಗ್ರಾಮದ ನಿಯಮದಂತೆ ಹೊರ ಊರಿನಿಂದ ಬಂದವರಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲ. ಯಾರಾದರೂ ವ್ಯಾಪಾರ ಮಾಡಲು ಬಯಸಿದರೆ ಮೊದಲು ಗ್ರಾಮದ ಮುಖ್ಯಸ್ಥರಿಂದ ಅನುಮತಿ ಪಡೆಯಬೇಕಿದೆ. ಅಲ್ಲದೇ ಈ ಗ್ರಾಮಕ್ಕೀಗ ಮಾರ್ಡನ್ ಗ್ರಾಮದ ಸ್ಥಾನಮಾನ ನೀಡಲಾಗಿದೆ. ಹೆಚ್ಚಾಗಿ ಪ್ರವಾಸಿಗರು ಆಗಮಿಸುವ ಕಾರಣದಿಂದ, ಅಲಲ್ಲಿ ಸೂಚನಾ ಫಲಕಗಳ ಅಳವಡಿಸಿ ಯಾವುದೇ ದುರಂತ ಸಂಭವಿಸದಂತೆ ನೋಡಿಕೊಳ್ಳಲಾಗುತ್ತಿದೆ.
ವಿಶಿಷ್ಟವೆಂದರೆ ಈ ಗ್ರಾಮದಲ್ಲಿ ಕಾಂಕ್ರಿಟ್ನಿಂದ ನಿರ್ಮಿಸಿದ ಮನೆಗಳು ಕಾಣಸಿಗುವುದಿಲ್ಲ. ಬದಲಿಗೆ ಸಾಂಪ್ರದಾಯಿಕ ಶೈಲಿಯ ಚಿತ್ತಾಕರ್ಷಕ ಮನೆಗಳು ಕಣ್ಣಿಗೆ ಬೀಳುತ್ತವೆ. 2019 - 20 ಸೇರಿ ಒಟ್ಟು 2 ಬಾರಿ ಸ್ವಚ್ಛತೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಮಾದರಿ ಗ್ರಾಮ ಎನಿಸಿದೆ.
ಎಂದಾದರು ಒಮ್ಮೆ ಹಿಮಾಲಯ ಪ್ರದೇಶಕ್ಕೆ ಭೇಟಿ ನೀಡಿದರೆ ಖಂಡಿತ ಈ ಗ್ರಾಮದ ಸೊಬಗು ಸವಿಯಲು ಮರೆಯದಿರಿ. ಬರಿ ಸ್ವಚ್ಛತೆ ಅಷ್ಟೇ ಅಲ್ಲ ಪರ್ವತ ಶ್ರೇಣಿಯ ತಪ್ಪಲಿನ ಸೌಂದರ್ಯ ರಾಶಿ ಕಣ್ತುಂಬಿಕೊಳ್ಳಲು ಈ ಮಾರ್ಗ ಹೇಳಿಮಾಡಿಸಿದಂತಿದೆ.