ವಿಶಾಖಪಟ್ಟಣ( ಆಂಧ್ರಪ್ರದೇಶ): ವಿಶಾಖಪಟ್ಟಣದ ಮಥುರಾ ವಾಡಾ ಕಾಲೋನಿಯಲ್ಲಿ ಆಗಿನ ವಿಶಾಖ ನಗರಾಭಿವೃದ್ಧಿ ಪ್ರಾಧಿಕಾರ (ವುಡಾ)ದಿಂದ ಮಂಜೂರಾದ ಲೇಔಟ್‌ನಲ್ಲಿ ಕಾಜ ಚಿನ್ನರಾವ್ (74) ಎಂಬ ನಿವೃತ್ತ ಎಎಸ್‌ಐ ನಿವೇಶನಗಳನ್ನು ಖರೀದಿಸಿದ್ದರು.
ಆದರೆ ಈಗ ಅಧಿಕಾರಿಗಳು ಈ ಭೂಮಿಯನ್ನು 22ಎ ನಿಷೇಧಿತ ಪಟ್ಟಿಗೆ ಸೇರ್ಪಡೆ ಮಾಡಿ ಆದೇಶ ಮಾಡಿದ್ದಾರೆ. ಇದರಿಂದಾಗಿ ನಿವೃತ್ತ ಎಎಸ್‌ಐ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪ್ರಾಧಿಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಹೀಗಾಗಿ ನಿವೃತ್ತ ಎಎಸ್‌ಐ ಕಷ್ಟಕ್ಕೆ ಸಿಲುಕಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಿಷೇಧಿತ ಜಮೀನುಗಳ ಪಟ್ಟಿ ಮುಂದುವರಿದಿರುವುದರಿಂದ ಮಾರಾಟ ಮತ್ತು ಖರೀದಿಗೆ ಅವಕಾಶ ಇಲ್ಲದಂತಾಗಿದೆ. ಇದು ನಿವೃತ್ತ ಅಧಿಕಾರಿಗೆ ತೀವ್ರ ಆರ್ಥಿಕ ಸಂಕಷ್ಟ ತಂದೊಡ್ಡಿದೆ.
ಈ ಬಗ್ಗೆ ಮಾತನಾಡಿರುವ ಕಾಜ ಚಿನ್ನರಾವ್, ಸರಕಾರಿ ಅಧಿಕಾರಿಗಳ ತಪ್ಪಿನಿಂದಾಗಿ ತಾವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಈ ಸಂಬಂಧ ಸ್ಪಂದನ ಕಾರ್ಯಕ್ರಮದಲ್ಲಿ ಪದೇ ಪದೆ ಮನವಿ ಕೂಡಾ ಮಾಡಿದ್ದೇನೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಬೇಸತ್ತಿರುವ ಚಿನ್ನರಾವ್ ತಮಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಾವು ಮನವಿ ಮಾಡಿದರೂ ಡಿಸಿ ಸರಿಯಾಗಿ ಸ್ಪಂದನೆ ನೀಡಿಲ್ಲ ಎಂದಿರುವ ಇವರು, ಡಿಸಿಗಳು ಅನುಚಿತವಾಗಿ ವರ್ತಿಸಿ ಸಾಯುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಿರುವವರೇ ಸ್ಪಂದಿಸದ ಬಳಿಕ, ಈ ವಯಸ್ಸಿನಲ್ಲಿ ಎಷ್ಟು ದಿನ ಹೋರಾಡಲು ಸಾಧ್ಯ ಎಂದು ಚಿನ್ನಾರಾವ್ ಬೇಸರ ಕೂಡಾ ವ್ಯಕ್ತಪಡಿಸಿದರು. ಇನ್ನಾದರೂ ಸರಕಾರ ತಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಚಿನ್ನರಾವ್ ಇದೇ ವೇಳೆ ಮನವಿ ಮಾಡಿದರು.
ಇದನ್ನು ಓದಿ: ಮಗಳ ಚೇಷ್ಟೆಗೆ ಭಯಗೊಂಡು ಪೊಲೀಸರ ಮೊರೆ ಹೋದ ಅಮ್ಮ: ತನಿಖೆಯಲ್ಲಿ ಅಚ್ಚರಿ ಅಂಶ ಬಹಿರಂಗ