ಶಹ್ದೋಲ್ (ಮಧ್ಯಪ್ರದೇಶ): ಬುಧವಾರ ಸಂಭವಿಸಿದ ಕೂನೂರು ಹೆಲಿಕಾಪ್ಟರ್ ಅಪಘಾತದಲ್ಲಿ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ಇತರ ಸೇನಾ ಸಿಬ್ಬಂದಿ ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಬಿಪಿನ್ ರಾವತ್- ಮಧುಲಿಕಾರ ವಿವಾಹದ ದಿನವನ್ನ ಅವರ ಮದುವೆ ಕಾರ್ಯ ನಡೆಸಿಕೊಟ್ಟಿದ್ದ ಪಂಡಿತ ಸುನಿಲ್ ದ್ವಿವೇದಿ ನೆನಪಿಸಿಕೊಂಡಿದ್ದಾರೆ.
ಬಿಪಿನ್ ರಾವತ್ ಹಾಗೂ ಮಧುಲಿಕಾ 1985ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಸಮಯದಲ್ಲಿ ಬಿಪಿನ್ ರಾವತ್ ಅವರು ಕ್ಯಾಪ್ಟನ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದರು. ತಂದೆ ಮತ್ತು ಮಗ ಇಬ್ಬರೂ ಉದಾರ ಪುರುಷರು, ಎಲ್ಲರನ್ನು ಗೌರವದಿಂದ ಕಾಣುತ್ತಿದ್ದರು ಎನ್ನುತ್ತಾರೆ ಸುನಿಲ್ ದ್ವಿವೇದಿ.

'ಈಟಿವಿ ಭಾರತ' ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸುನಿಲ್ ದ್ವಿವೇದಿ, ಪಂಜಾಬ್ನ ಬಥಿಂದಾದಲ್ಲಿ ತಿಲಕ್ ಕಾರ್ಯಕ್ರಮವನ್ನು ನಾನು ನೆರವೇರಿಸಿದ್ದೆ. ಮರುದಿನ ವಿವಾಹ ಸಮಾರಂಭ ದೆಹಲಿಯಲ್ಲಿತ್ತು. ಅಲ್ಲಿಯೂ ನಾನು ಭಾಗಿಯಾಗಿದ್ದೆ ಎಂದರು.

ಇದನ್ನೂ ಓದಿ: Madhulika Rawat: ಸಹಾಯಹಸ್ತದ ಸಂಕೇತವಾಗಿದ್ದರು ಬಿಪಿನ್ ರಾವತ್ ಪತ್ನಿ ಮಧುಲಿಕಾ
ಮಧುಲಿಕಾ ಅವರು ನಮ್ಮ ಮಧ್ಯಪ್ರದೇಶದ ಶಹ್ದೋಲ್ನವರು. ನಮ್ಮ ತಾತ ಪುರೋಹಿತ, ನಮ್ಮದು ಪುರೋಹಿತ ಕುಟುಂಬ. ಹೀಗಾಗಿ ಮಧುಲಿಕಾರ ತಂದೆ ಮೃಗೇಂದ್ರ ಸಿಂಗ್ ಜೊತೆ ನಮಗೆ ನಂಟಿತ್ತು. ನಾವು ಅವರನ್ನು ರಾಜಾ ಸಾಹಿಬ್ ಎಂದು ಕರೆಯುತ್ತಿದ್ದೆವು. ಅವರ ಕುಟುಂಬದ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇವೆ. ಬಿಪಿನ್ ರಾವತ್ ನಮ್ಮೂರಿನ ಅಳಿಯ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ. ಅವರು ತಮ್ಮ ಶೌರ್ಯ ಮತ್ತು ಇಚ್ಛಾಶಕ್ತಿಯಿಂದ ರಾಷ್ಟ್ರಕ್ಕೆ ಕೀರ್ತಿ ತಂದವರು. ಯಾವಾಗಲೂ ಅವರನ್ನು ಗೌರವದಿಂದ ಸ್ಮರಿಸಲಾಗುವುದು ಎಂದು ಪಂಡಿತ ದ್ವಿವೇದಿ ಹೇಳಿದರು.
