ಅಹಮದಾಬಾದ್(ಗುಜರಾತ್): ಇತ್ತೀಚಿನ ದಿನಗಳಲ್ಲಿ ಗುಜರಾತ್ನಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು, ಇದೀಗ ಮತ್ತೊಂದು ಘಟನೆ ನಡೆದಿದೆ. ಪುಟಾಣಿ ಮಗುವಿನೊಂದಿಗೆ ದಂಪತಿ ಕಟ್ಟಡದ 12ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಗುಜರಾತ್ನ ಗೋಟಾ ಪ್ರದೇಶದ ದೇವಾ ಹೈಟ್ಸ್ನಲ್ಲಿ ಈ ಪ್ರಕರಣ ನಡೆದಿದೆ.
ಪೊಲೀಸ್ ಪೇದೆ ಕುಲದೀಪ್ ಸಿಂಗ್ ಯಾದವ್ ಎಂಬಾತ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಈ ನಿರ್ಧಾರ ಕೈಗೊಂಡಿದ್ದಾರೆ. ಇನ್ಸ್ಪೆಕ್ಟರ್ ಎನ್ಆರ್ ವಾಘೇಲ್ ನೀಡಿರುವ ಮಾಹಿತಿ ಪ್ರಕಾರ, ತಡರಾತ್ರಿ ಗಂಡ-ಹೆಂಡತಿ ಜಗಳ ಮಾಡಿದ್ದು, ಅದು ತಾರಕಕ್ಕೇರಿದಾಗ ದುಡುಕಿನ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರ ತಂಡ ಆಗಮಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದೆ. ಈಗಾಗಲೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರನ್ನು ಕುಲದೀಪ್ ಸಿಂಗ್, ಪತ್ನಿ ರಿದ್ಧಿಬೆನ್ ಹಾಗೂ ಬಾಲಕಿ ಆಕಾಂಕ್ಷಿ ಎಂದು ಗುರುತಿಸಲಾಗಿದೆ. ನಿನ್ನೆ ತಡರಾತ್ರಿ 1 ಗಂಟೆ ಬಳಿಕ ಘಟನೆ ನಡೆದಿದೆ.
ಇದನ್ನೂ ಓದಿ: ಪತ್ನಿ ಗೋಮಾಂಸ ತಿನ್ನಿಸಿದಳೆಂಬ ಕೊರಗು: ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಶರಣಾದ ಪತಿ
ಗುಜರಾತ್ನ ವಸ್ತ್ರಾಪುರ ಪೊಲೀಸ್ ಠಾಣೆಯಲ್ಲಿ ಕುಲದೀಪ್ ಸಿಂಗ್ ಕಾರ್ಯನಿರ್ವಹಿಸುತ್ತಿದ್ದರು. ಗೋಟಾ ಪ್ರದೇಶದ ಬಹುಮಹಡಿ ಕಟ್ಟಡದ 12ನೇ ಪ್ಲೋರ್ನಲ್ಲಿ ಹೆಂಡತಿ, ಮಗುವಿನೊಂದಿಗೆ ವಾಸವಾಗಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿರುವ ಕಟ್ಟಡದಲ್ಲಿ ವಾಸವಾಗಿರುವ ನಿವಾಸಿ, ಮೊದಲು ರಿದ್ಧಿ ಜಿಗಿದಿದ್ದು, ಇದರ ಬೆನ್ನಲ್ಲೇ ಕುಲದೀಪ್ ಹಾಗೂ ಮಗಳು ಕಟ್ಟಡದಿಂದ ಹಾರಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ಕಟ್ಟಡದಲ್ಲಿ ವಾಸವಾಗಿದ್ದ ಅವರ ಸಹೋದರಿ ನೀಡಿರುವ ಮಾಹಿತಿ ಪ್ರಕಾರ ದಂಪತಿಗಳು ಮೇಲಿಂದ ಮೇಲೆ ಜಗಳವಾಡ್ತಿದ್ದರು ಎಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಟ್ಟಿಕೊಂಡ ಹೆಂಡತಿ ಗೋಮಾಂಸ ತಿನ್ನಿಸಿದ್ದಕ್ಕಾಗಿ ಮನನೊಂದು ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಹ ನಡೆದಿತ್ತು.