ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಹಿಂಸಾಚಾರದ ಮೋಸ್ಟ್ ವಾಂಟೆಡ್ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ವೇಳೆ ಕೈಯಲ್ಲಿ ಖಡ್ಗ ಬೀಸುತ್ತಿರುವ ವ್ಯಕ್ತಿಯನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿದೆ. ಕೆಂಪು ಕೋಟೆಯ ಹಿಂಸಾಚಾರದ ಸಂದರ್ಭದಲ್ಲಿ ಆತ ಬಳಸಿದ ಎರಡು ಕತ್ತಿಗಳನ್ನು ಪೊಲೀಸರು ಆತನ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಮಣಿಂದರ್ ಸಿಂಗ್ ಅಲಿಯಾಸ್ ಮೋನಿ ಎಂದು ಗುರುತಿಸಲಾಗಿದೆ. ಈತ ಸ್ವರೂಪ್ ನಗರದ ಸಿಂಧಿ ಕಾಲೋನಿಯ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದಾನೆ.
ಮಾಹಿತಿಯ ಪ್ರಕಾರ, ಕೆಂಪು ಕೋಟೆ ಹಿಂಸಾಚಾರ ಪ್ರಕರಣದ ತನಿಖೆ ದೆಹಲಿ ಪೊಲೀಸರ ವಿಶೇಷ ಸೆಲ್ ನಡೆಸುತ್ತಿದೆ. ಇತ್ತೀಚೆಗೆ, ಸ್ವರೂಪ್ ನಗರದ ನಿವಾಸಿ ಮನಿಂದರ್ ಸಿಂಗ್ ಕೆಂಪು ಕೋಟೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ವಿಶೇಷ ಸೆಲ್ಗೆ ಸಿಕ್ಕಿತು. ಘಟನೆಯ ಸಮಯದಲ್ಲಿ, ಮೋನಿ ಕತ್ತಿಯನ್ನು ಬೀಸುತ್ತಿರುವ ಚಿತ್ರ ಬಹಿರಂಗವಾಗಿತ್ತು. ಮಂಗಳವಾರ ರಾತ್ರಿ ಪಿತಾಂಪುರದಲ್ಲಿರುವ ಸಿಡಿ ಬ್ಲಾಕ್ ಬಸ್ ನಿಲ್ದಾಣದ ಬಳಿ ಮೋನಿ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ವಿಶೇಷ ಸೆಲ್ನ ತಂಡ ದಾಳಿ ನಡೆಸಿ, ಬಂಧಿಸಿದೆ. ಬಳಿಕ ಪೊಲೀಸ್ ತಂಡವು ಮೋನಿಯನ್ನು ಆತನ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತ ಕೆಂಪು ಕೋಟೆಯಲ್ಲಿ ಬೀಸುತ್ತಿದ್ದ ಎರಡೂ ಕತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಿಧಿಯಲ್ಲಿ ಬಸ್ ದುರಂತ: ಮೃತರ ಸಂಖ್ಯೆ 49ಕ್ಕೆ ಏರಿಕೆ
ಫೇಸ್ಬುಕ್ ವಿಡಿಯೋಗಳಿಂದ ಪ್ರಚೋದಿತನಾದ ಮೋನಿ: ವಿಚಾರಣೆಯ ಸಮಯದಲ್ಲಿ, ತಾನು ಫೇಸ್ಬುಕ್ ವಿಡಿಯೋಗಳಿಂದ ಪ್ರೇರಿತಗೊಂಡು, ಪ್ರತಿಭಟನೆಯಲ್ಲಿ ಭಾಗಿಯಾಗಿರುವುದಾಗಿ ಮೋನಿ ತಿಳಿಸಿದ್ದಾನೆ. ಅಲ್ಲದೇ ಈ ವಿಡಿಯೋಗಳಿಂದ ಪ್ರಚೋದಿತನಾಗಿ ತಾನು ಈ ಪರೇಡ್ನಲ್ಲಿ ಭಾಗಿಯಾಗಿರುವುದಾಗಿ ಮೋನಿ ತಿಳಿಸಿದ್ದಾನೆ. ದೆಹಲಿಯ ಸಿಂಘು ಗಡಿಯಲ್ಲಿ ನಡೆದ ಹಲವಾರು ಪ್ರತಿಭಟನೆಗಳಲ್ಲಿ ತಾನು ಭಾಗಿಯಾಗಿದ್ದು, ಅಲ್ಲಿ ನಡೆದ ಭಾಷಣಗಳು ತನ್ನ ಮೇಲೆ ಪ್ರಭಾವಬೀರಿವೆ ಎಂದಿದ್ದಾನೆ. ಅಲ್ಲದೇ ತನ್ನ ನೆರೆಹೊರೆಯಲ್ಲಿ ವಾಸಿಸುವ ಜನರಿಗೆ ಸಹ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದ್ದೇನೆ ಎಂದು ಮೋನಿ ಹೇಳಿದ್ದಾನೆ.
ತನ್ನ ನೆರೆಹೊರೆಯ ಐವರೊಂದಿಗೆ ಬೈಕ್‌ನಲ್ಲಿ ಟ್ರ್ಯಾಕ್ಟರ್ ಪರೆಡ್ನಲ್ಲಿ ಸೇರಿಕೊಂಡೆ. ಅವರು ಮುಕರ್ಬಾ ಚೌಕ್ ಕಡೆಗೆ ಹೋಗಿ ಅಲ್ಲಿಂದ ಕೆಂಪು ಕೋಟೆಯನ್ನು ತಲುಪಿದರು. ಪ್ರತಿಬಟನೆಯಲ್ಲಿ ಪಾಲ್ಗೊಳ್ಳಲು ತೆರಳುವಾಗ ಎರಡು ಕತ್ತಿಗಳನ್ನು ಸಹ ತನ್ನ ಬಳಿ ಇಟ್ಟುಕೊಂಡಿದ್ದಾಗಿ ಮೋನಿ ಹೇಳಿದ್ದಾನೆ. ತನ್ನ ಐದು ಜನ ಸಹಚರರೊಂದಿಗೆ ಕೆಂಪು ಕೋಟೆಯನ್ನು ಪ್ರವೇಶಿಸಿದ ಮೋನಿ, ಅಲ್ಲಿ ಖಡ್ಗವನ್ನು ಬೀಸಿರುವುದಾಗಿ ಒಪ್ಪಿಕೊಂಡಿದ್ದಾನೆ.