ಡೆಹ್ರಾಡೂನ್, ಉತ್ತರಾಖಂಡ: ವೈದ್ಯಕೀಯ ಉಪಕರಣಗಳನ್ನು, ಔಷಧಗಳನ್ನು ಕಾಳಮಾರುಕಟ್ಟೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಉತ್ತರಾಖಂಡ ಪೊಲೀಸರು ನೀಡಿದ್ದ ಸಹಾಯವಾಣಿಗೆ ಓರ್ವ ದುಷ್ಕರ್ಮಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳಿಸಿ, ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಕೀಯ ಸಾಧನಗಳ ಅಕ್ರಮ ಸಂಗ್ರಹವನ್ನು ತಡೆಯಲು, ಸಾರ್ವಜನಿಕರಿಗೆ ಔಷಧಿಗಳು, ಆಮ್ಲಜನಕ, ಪ್ಲಾಸ್ಮಾ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲು ಅನುವಾಗುವ ಸಲುವಾಗಿ ಡಿಜಿಪಿ ಅಶೋಕ್ ಕುಮಾರ್ ಇತ್ತೀಚೆಗೆ 112 ಸಹಾಯವಾಣಿ ಮೂಲಕ ವಾಟ್ಸಪ್ ಸಂಖ್ಯೆಯೊಂದನ್ನು ನೀಡಿದ್ದರು.
ಇದನ್ನೂ ಓದಿ: ನಾರದಾ ವಿವಾದ: ಟಿಎಂಸಿ ನಾಯಕರ ಜಾಮೀನಿಗೆ ಕೋಲ್ಕತ್ತಾ ಹೈಕೋರ್ಟ್ ತಡೆ
ಈ ವಾಟ್ಸಪ್ ನಂಬರ್ಗೆ ಹಲವು ಮಂದಿ ಸಂದೇಶಗಳನ್ನು ಕಳಿಸಿ, ದೂರುಗಳನ್ನು ದಾಖಲಿಸುತ್ತಿದ್ದರು. ಬಂದ ದೂರುಗಳನ್ನು ಎಸ್ಟಿಎಫ್ ಮತ್ತು ಪೊಲೀಸ್ ಸಂಸ್ಥೆಗಳು ಕೈಗೆತ್ತಿಕೊಂಡು ವೈದ್ಯಕೀಯ ಸಾಮಗ್ರಿಗಳ ಕಾಳದಂಧೆ ನಡೆಸುವುದನ್ನು ತಡೆಯುತ್ತಿದ್ದರು.
ಈ ಮಧ್ಯೆ ದುಷ್ಕರ್ಮಿಯೋರ್ವ ಪೊಲೀಸರು ನೀಡಿದ್ದ ವಾಟ್ಸಪ್ ನಂಬರ್ಗೆ ಅಶ್ಲೀಲ ಫೋಟೋ ಮತ್ತು ವಿಡಿಯೋವನ್ನು ಕಳಿಸಿದ್ದಾನೆ. ಆರೋಪಿಯ ವಿರುದ್ಧ ಐಟಿ ಕಾಯ್ದೆಯಡಿ ದೂರು ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.