ನವದೆಹಲಿ: ರಾಷ್ಟ್ರ ರಾಜಧಾನಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯಿರುವ ಕಟ್ಟಡವೊಂದರಲ್ಲಿ ಶುಕ್ರವಾರ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, 27 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ನಿನ್ನೆ ರಾತ್ರಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಪ್ರೀತಿಪಾತ್ರರಿಗಾಗಿ ಕುಟುಂಬಸ್ಥರು ಹುಡುಕುತ್ತಿರುವ ದೃಶ್ಯ ಮನಕಲುಕುವಂತಿದೆ.
ದುರಂತ ಸಂಭವಿಸಿದ 3 ನೇ ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಾಚರಣೆ ನಡೆಸಿ ಸುಮಾರು 60-70 ಜನರನ್ನು ರಕ್ಷಿಸಲಾಗಿದೆ, ಇನ್ನೂ ಕೆಲವರು ಒಳಗೆ ಸಿಲುಕಿಕೊಂಡಿದ್ದಾರೆ. ಮೃತರ ವಿವರಗಳು ಇನ್ನೂ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಸಹೋದರ ಅಜಿತ್ ತಿವಾರಿ ಮಾಧ್ಯಮಗಳೊಂದಿಗೆ ಮಾತನಾಡಿ, 'ನನ್ನ ಸಹೋದರಿ ಮೋನಿಕಾ (21) ನಾಪತ್ತೆಯಾಗಿದ್ದಾಳೆ. ಕಳೆದ ತಿಂಗಳಷ್ಟೇ ಸಿಸಿಟಿವಿ ಪ್ಯಾಕೇಜಿಂಗ್ ಘಟಕದಲ್ಲಿ ಕೆಲಸಕ್ಕೆ ಸೇರಿದ್ದಳು. ಬೆಂಕಿ ದುರಂತದ ಬಗ್ಗೆ ನಮಗೆ ಶುಕ್ರವಾರ ಸಂಜೆ 5 ಗಂಟೆಗೆ ತಿಳಿಯಿತು. ಸಂಜೆ 7 ಗಂಟೆಗೆ ನಾವು ಆಕೆಯನ್ನು ಹುಡುಕ ತೊಡಗಿದೆವು ಎಂದು ಹೇಳಿದರು. ಮೋನಿಕಾ ತನ್ನ ಇಬ್ಬರು ಸಹೋದರರು ಮತ್ತು ಸಹೋದರಿಯೊಂದಿಗೆ ದೆಹಲಿಯ ಅಗರ್ ನಗರದಲ್ಲಿ ವಾಸಿಸುತ್ತಿದ್ದಾರೆ. ಈಕೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯವರು.
ಮಾಧ್ಯಮಗಳೊಂದಿಗೆ ಮಾತನಾಡಿದ ಇನ್ನೊಬ್ಬ ಮಹಿಳೆ, 'ಸಿಸಿಟಿವಿ ಕ್ಯಾಮರಾ ಪ್ಯಾಕೇಜಿಂಗ್ ಘಟಕದಲ್ಲಿ ಕೆಲಸ ಮಾಡುವ ನನ್ನ ಹಿರಿಯ ಪುತ್ರಿ ಮನೆಗೆ ಬಂದಿಲ್ಲ. ಕಳೆದ ಮೂರು ತಿಂಗಳಿನಿಂದ ನನ್ನ ಮಗಳು ಪೂಜಾ ಸಿಸಿಟಿವಿ ಕ್ಯಾಮರಾ ಪ್ಯಾಕೇಜಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದಾಳೆ, ನಾವು ಮುಬಾರಕ್‌ಪುರದಲ್ಲಿ ವಾಸಿಸುತ್ತಿದ್ದೇವೆ ಮತ್ತು ರಾತ್ರಿ 9 ಗಂಟೆಗೆ ಘಟನೆಯ ಬಗ್ಗೆ ತಿಳಿಯಿತು, ಆಕೆಯ ಎಡಗಣ್ಣಿನ ಕೆಳಗೆ ಕತ್ತರಿಸಿದ ಗುರುತು ಇದೆ, ವಿವಿಧ ಆಸ್ಪತ್ರೆಗಳಲ್ಲಿ ಅವಳಿಗಾಗಿ ಹುಡುಕುತ್ತಿದ್ದೇವೆ. ನಮ್ಮ ಕುಟುಂಬಕ್ಕೆ ಆಕೆಯೇ ಆಧಾರ' ಎಂದು ನೋವು ತೋಡಿಕೊಂಡರು.
ದುರಂತ ಸಂಭವಿಸಿದ ಕಟ್ಟಡದ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕಿತ್ ಎಂಬುವರು ಮಾತನಾಡಿ, 'ನಾನು ಜೀವಂತವಾಗಿರುವುದು ನನ್ನ ಅದೃಷ್ಟ. ಬೆಂಕಿ ಕಾಣಿಸಿಕೊಂಡಾಗ ಎರಡನೇ ಮಹಡಿಯಲ್ಲಿ ಅಧಿವೇಶನ ನಡೆಯುತ್ತಿತ್ತು. ಈ ವೇಳೆ ನಾವು ಬೆಂಕಿಯನ್ನು ಗಮನಿಸಿ, ಗಾಜಿನ ಕಿಟಕಿಗಳನ್ನು ಒಡೆದು ಹೇಗೋ ಪಾರಾಗಿದ್ದೇವೆ' ಎಂದು ಹೇಳಿದರು.
ಇದನ್ನೂ ಓದಿ: ದೆಹಲಿಯ ಬೃಹತ್ ಕಟ್ಟಡದಲ್ಲಿ ಬೆಂಕಿ: 26 ಮಂದಿ ಸಾವು, ಅನೇಕರ ಸ್ಥಿತಿ ಗಂಭೀರ