ಚೆನ್ನೈ: ವಿಚಾರಣಾಧೀನ ಕೈದಿಯೊಬ್ಬ ಚೆನ್ನೈನ ಸೆಂಟ್ರಲ್ ನಾರ್ಕೋಟಿಕ್ಸ್ ಕಂಟ್ರೋಲ್ ಯೂನಿಟ್ ಕಚೇರಿಯ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಿನ್ನೆ ಚೆನ್ನೈನ ಚೋಳವರಂ ಬಳಿ ಮಾದಕ ವಸ್ತು ಸಾಗಣೆ ನಡೆಯುತ್ತಿದೆ ಎಂಬ ರಹಸ್ಯ ಮಾಹಿತಿ ಆಧರಿಸಿ ಕೇಂದ್ರ ಮಾದಕ ವಸ್ತು ನಿಯಂತ್ರಣ ಘಟಕದ ಪೊಲೀಸರು ತೀವ್ರ ವಾಹನ ತಪಾಸಣೆ ನಡೆಸಿದ್ದರು. ಆ ಮಾರ್ಗವಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ 48 ಕೆ.ಜಿ. ಮೆಥಾಂಫೆಟಮೈನ್ ದೊರೆತಿದ್ದು, ಕೂಡಲೇ ಆ ಕಾರಿನಲ್ಲಿ ಬಂದ ಯುವಕರನ್ನು ಬಂಧಿಸಲಾಯಿತು. ಬಳಿಕ ಪೊಲೀಸರು ಯುವಕನನ್ನು ಅಯ್ಯಪ್ಪದ ಕೇಂದ್ರ ಮಾದಕ ವಸ್ತು ನಿಯಂತ್ರಣ ಘಟಕದ ಕಚೇರಿಗೆ ಕರೆದೊಯ್ದು ತನಿಖೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಯುವಕ ತೆಲಂಗಾಣ ರಾಜ್ಯದ ರಾಯಪ್ಪನ್ ರಾಜಿ ಆಂಟೋನಿ ಎಂದು ತಿಳಿದುಬಂದಿದೆ. ಈ ನಡುವೆ ತನಿಖೆಯ ವೇಳೆ ರಾಯಪ್ಪನ್ ಮಧ್ಯರಾತ್ರಿ 3ನೇ ಮಹಡಿಯಿಂದ ಏಕಾಏಕಿ ಜಿಗಿದಿದ್ದಾನೆ. ಪೊಲೀಸರು ಆತನನ್ನು ರಕ್ಷಿಸಿ ಆವಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಯುವಕ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ತಿರುಮುಲ್ಲೈವೈಲ್ ಪೊಲೀಸರು ತನಿಖೆಯ ವೇಳೆ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ವೇಳೆ, ರಾಯಪ್ಪನ್ ತೆಲಂಗಾಣ ರಾಜ್ಯದಲ್ಲಿ ಸಾಫ್ಟ್ವೇರ್ ಕಂಪನಿ ನಡೆಸುತ್ತಿರುವುದಾಗಿ ಕುಟುಂಬದವರು ಹಾಗೂ ಸಂಬಂಧಿಕರಿಗೆ ತಿಳಿಸಿ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವುದು ಹಾಗೂ ಆತನ ವಿರುದ್ಧ ತೆಲಂಗಾಣದಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ತಾನು ಮಾದಕವಸ್ತು ವ್ಯವಹಾರ ನಡೆಸುತ್ತಿರುವುದರ ಬಗ್ಗೆ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಪ್ರಕರಣವನ್ನು ಸಿಬಿಸಿಐಡಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: 30 ಕೋಟಿ ರೂಪಾಯಿಗಳ ನಿಷೇಧಿತ ಡ್ರಗ್ಸ್ ಪತ್ತೆ.. ಮೂವರ ಬಂಧನ