ನರಸೀಪಟ್ಟಣ( ಆಂಧ್ರಪ್ರದೇಶ): ಪತ್ನಿಯನ್ನು ಗಾರ್ಮೆಂಟ್ ಅಂಗಡಿ ಮಾಲೀಕನೊಬ್ಬ ಅಪಹರಿಸಿ, ತನ್ನಲ್ಲಿ ಉಳಿಸಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇದು ನನ್ನನ್ನು ಘಾಸಿಗೊಳಿಸಿದ್ದು, ಇಹಲೋಕ ತ್ಯಜಿಸುತ್ತಿದ್ದೇನೆ. ತಪ್ಪು ಮಾಡಿದವರ ವಿರುದ್ಧ ಕ್ರಮವಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಶರಣಾಗಿದ್ದಾನೆ.
ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ನರಸೀಪಟ್ಟಣದ ಕಾಮಿರೆಡ್ಡಿ ದುರ್ಗಾಪ್ರಸಾದ್ (35) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ದುರ್ಗಾಪ್ರಸಾದ್ ಇದಕ್ಕೂ ಮೊದಲು ಸೆಲ್ಫಿ ವಿಡಿಯೋ ಮಾಡಿದ್ದಾರೆ. ಅದರಲ್ಲಿ 'ನರಸೀಪಟ್ಟಣದ ಗಾರ್ಮೆಂಟ್ಸ್ ಅಂಗಡಿಯ ಮ್ಯಾನೇಜರ್ ನನ್ನ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ. ಅವಳನ್ನು ತನ್ನೊಂದಿಗೆ ಇಟ್ಟುಕೊಂಡಿದ್ದಾನೆ. ಈ ಬಗ್ಗೆ ಅವನು ಗೊತ್ತಿಲ್ಲದಂತೆ ನಟಿಸುತ್ತಿದ್ದಾನೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದು, ಅವನ ಮತ್ತು ಇತರ ಇಬ್ಬರ ಕಿರುಕುಳದಿಂದ ನಾನು ಸಾಯುತ್ತಿದ್ದೇನೆ.
ಗಾರ್ಮೆಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಯುವಕನನ್ನು ವಿಚಾರಿಸಿದರೆ ಈ ಬಗ್ಗೆ ಎಲ್ಲ ಮಾಹಿತಿ ಸಿಗಲಿದೆ. ಈ ಹಿಂದೆ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷಿಸಿದ್ದಾರೆ. ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಈ ವಿಡಿಯೋಗೆ ಕುರಿತು ಪ್ರತಿಕ್ರಿಯಿಸಿದ ಸಿಐ ಶ್ರೀನಿವಾಸ ರಾವ್, ದುರ್ಗಾಪ್ರಸಾದ್ ವಿರುದ್ಧ ಪತ್ನಿಯೇ ದೂರು ನೀಡಿದ್ದರು. ಆತನಿಗೆ ಕೌನ್ಸೆಲಿಂಗ್ ಮಾಡಲಾಗಿತ್ತು. ಆ ಸಿಟ್ಟಿನಿಂದ ಸಾಯುವ ಮುನ್ನ ಪೊಲೀಸರ ಮೇಲೆ ಆರೋಪ ಮಾಡಿರಬಹುದು ಎಂದು ಹೇಳಿದ್ದಾರೆ.
ತಾಯಿಯ ದೂರೇ ಬೇರೆ: ಇನ್ನು ಮಗನ ಸಾವಿನ ಬಗ್ಗೆ ಆತನ ಅನಾರೋಗ್ಯ ಪೀಡಿತ ತಾಯಿ ಹೇಳೋದೇ ಬೇರೆ. ದುರ್ಗಾ ಪ್ರಸಾದ್‌ಗೆ 10 ವರ್ಷಗಳ ಹಿಂದೆ ಯುವತಿಯೊಂದಿಗೆ ವಿವಾಹವಾಗಿತ್ತು. ಆಕೆ ಆತನನ್ನು ತೊರೆದು ಹೋದಳು. ಬಳಿಕ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಅನಾಥ ಹುಡುಗಿಯನ್ನು ಮದುವೆಯಾದ.
ಏಪ್ರಿಲ್‌ನಲ್ಲಿ ಸಹೋದರನ ಮನೆಗೆ ಹೋದ ಆಕೆ ವಾಪಸ್ ಬಂದಿಲ್ಲ. ಕುಡಿತದ ಚಟ ಹಾಗೂ ಪತ್ನಿ ಬಿಟ್ಟು ಹೋದ ನೋವಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಾಯಿ ಸತ್ಯವತಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.