ಆಲಪ್ಪುಳ(ಕೇರಳ): ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಸಂಕಷ್ಟ ಅನುಭವಿಸಿರುವ ಅನೇಕ ಕಥೆಗಳು ನಮ್ಮ ಕಣ್ಮುಂದೆ ಇವೆ. ಆದರೆ, ಇದರ ಸದುಪಯೋಗ ಪಡೆದುಕೊಂಡ ಬೆರಳೆಣಿಕೆಯಷ್ಟು ಜನರು ಹೊಸ ಹೊಸ ಅವಿಷ್ಕಾರ ಮಾಡಿದ್ದಾರೆ. ಇದೀಗ ನಾವು ಹೇಳಲು ಹೊರಟಿರುವ ಸ್ಟೋರಿ ಕೂಡ ಅಂತಹ ಪ್ರತಿಭಾನ್ವಿತ ವ್ಯಕ್ತಿಗೆ ಸಂಬಂಧಿಸಿದೆ.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ವ್ಯಕ್ತಿಯೋರ್ವ ತಾವೇ ನಿರ್ಮಾಣ ಮಾಡಿರುವ ವಿಮಾನದಲ್ಲಿ ಇದೀಗ ಕುಟುಂಬದೊಂದಿಗೆ ವಿದೇಶಗಳ ಸಂಚಾರ ಮಾಡ್ತಿದ್ದಾರೆ. ಕೇರಳದ ಆಲಪ್ಪುಳ ಜಿಲ್ಲೆಯ ಅಶೋಕ್ ನಾಲ್ಕು ಸೀಟುಗಳಿರುವ ವಿಮಾನ ನಿರ್ಮಿಸಿದ್ದು, ಅದರಲ್ಲಿ ಈಗಾಗಲೇ ಯುರೋಪ್ ಪ್ರವಾಸ ಸಹ ಮಾಡಿ ಬಂದಿದ್ದಾರೆ. ಈ ವಿಮಾನ ನಿರ್ಮಿಸಿಲು ಅಶೋಕ್ ಬರೋಬ್ಬರಿ 18 ತಿಂಗಳಕ್ಕೂ ಅಧಿಕ ಕಾಲಾವಧಿ ತೆಗೆದುಕೊಂಡಿದ್ದಾರೆ. ಅಶೋಕ್ ಅಲಿಸೇರಿಲ್ ತಾಮರಾಕ್ಷನ್ ಕೇರಳದ ಮಾಜಿ ಶಾಸಕ ಎ ವಿ ತಾಮರಾಕ್ಷನ್ ಅವರ ಪುತ್ರ. ಪೈಲಟ್ ಲೈಸನ್ಸ್ ಹೊಂದಿರುವ ಅಶೋಕ್, ತಮ್ಮ ಕುಟುಂಬದೊಂದಿಗೆ ಪ್ರಪಂಚದ ಪ್ರವಾಸ ಮಾಡುತ್ತಿದ್ದಾರೆ.
ವಿಮಾನ ನಿರ್ಮಾಣ ಕೆಲಸ ಆರಂಭವಾಗಿದ್ದು ಹೀಗೆ?: ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಅಶೋಕ್ ಲಾಕ್ಡೌನ್ ಸಂದರ್ಭದಲ್ಲಿ ಖುದ್ದಾಗಿ ವಿಮಾನ ತಯಾರಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಅದಕ್ಕೋಸ್ಕರ ಲಂಡನ್ನಲ್ಲಿ ತಾವು ಉಳಿದುಕೊಂಡಿದ್ದ ಮನೆಯ ಪಕ್ಕದಲ್ಲಿ ಕೆಲಸ ಆರಂಭಿಸುತ್ತಾರೆ. 2019ರ ಮೇ ತಿಂಗಳಲ್ಲಿ ಇದರ ಕೆಲಸ ಆರಂಭಿಸಿದ ಅಶೋಕ್ 2021ರ ನವೆಂಬರ್ ವೇಳೆಗೆ ಈ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಅದಕ್ಕೋಸ್ಕರ ಅನೇಕ ಯುಟ್ಯೂಬ್ ಚಾನಲ್, ಪುಸ್ತಕ ಅಭ್ಯಾಸ ಮಾಡಿದ್ದಾರೆ. ಜೊತೆಗೆ ಅನೇಕ ತಜ್ಞರ ಸಹಾಯವನ್ನು ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಮೂರು ತಿಂಗಳ ಪರೀಕ್ಷಾ ಹಾರಾಟ ನಡೆಸಿ, ಇದೀಗ ಪರವಾನಿಗೆ ಸಹ ಪಡೆದುಕೊಂಡಿದ್ದಾರೆ.
ವಿಮಾನ ಹಾರಾಟಕ್ಕಾಗಿ ಪರವಾನಿಗೆ ಪಡೆದುಕೊಂಡ ಅಶೋಕ್ ಈಗಾಗಲೇ ಕುಟುಂಬದೊಂದಿಗೆ ಜರ್ಮನಿ, ಇಟಲಿ ಮತ್ತು ಪ್ರಾನ್ಸ್ನಂತಹ ದೇಶಗಳಲ್ಲಿ ಹೋಗಿ ಬಂದಿದ್ದಾರೆ. ತಮ್ಮ ವಿಮಾನಕ್ಕೆ 'ಜಿ ದಿಯಾ' ಎಂದು ಹೆಸರಿಟ್ಟಿದ್ದಾರೆ. ದಿಯಾ ಎಂಬುದು ಅವರ ಮಗಳ ಹೆಸರಾಗಿದೆ.
ಇದನ್ನೂ ಓದಿರಿ: ಮಿಲಿಯನ್ ಡಾಲರ್ ಚಿತ್ರ.. ರೈತನ ಬಡತನದ ನೊಗಕ್ಕೆ ಭುಜ ಕೊಟ್ಟ ತಾಯಿ, ಮಗಳು!
ತಮ್ಮ ಸಾಧನೆ ಬಗ್ಗೆ ಅಶೋಕ್ ಹೇಳಿದ್ದೇನು?: 2019ರಲ್ಲಿ ಬ್ರಿಟನ್ ಸಿವಿಲ್ ಏವಿಯೇಷನ್ನಿಂದ ವಾಣಿಜ್ಯ ಪೈಲಟ್ ಲೈಸನ್ಸ್ ಪಡೆದುಕೊಂಡಿದ್ದೆ. ಆದರೆ, ಪ್ರಯಾಣ ಬೆಳೆಸಲು ನಾಲ್ಕು ಆಸನಗಳ ವಿಮಾನ ಬೇಕಾಗಿತ್ತು. ಈ ವೇಳೆ ವಿಮಾನಗಳ ಬಿಡಿ ಭಾಗಗಳ ಬಗ್ಗೆ ಆರಂಭದಲ್ಲಿ ತಿಳಿದುಕೊಂಡೆ. ನಂತರ ಯೂಟ್ಯೂಬ್ನಲ್ಲಿ ಅದರ ಬಗ್ಗೆ ನೋಡಿ, ತಯಾರಿಸುವ ಕಾರ್ಯ ಆರಂಭಿಸಿದೆ. ಈ ವೇಳೆ ಅನೇಕ ತಜ್ಞರ ಸಹಾಯ ಪಡೆದುಕೊಂಡಿದ್ದೇನೆ. ವಿಮಾನ ಸಿದ್ಧಗೊಳ್ಳುತ್ತಿದ್ದಂತೆ ದಕ್ಷಿಣ ಆಫ್ರಿಕಾಗೆ ಹೋಗಿ ಪರೀಕ್ಷಾ ಹಾರಾಟ ನಡೆಸಿದೆ. ವಿಮಾನ ಸಂಪೂರ್ಣವಾಗಿ ಪೂರ್ಣಗೊಳ್ಳಲು ಎರಡು ವರ್ಷಗಳ ಕಾಲ ಬೇಕಾಯಿತು. ಕಳೆದ ಮೇ ತಿಂಗಳಲ್ಲಿ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ಅನುಮತಿ ಸಹ ಸಿಕ್ಕಿದೆ ಎಂದರು.
ತಯಾರಿಸಿರುವ ವಿಮಾನದಲ್ಲಿ ಗಂಟೆಗೆ 250 ಕಿಲೋ ಮೀಟರ್ ವೇಗದಲ್ಲಿ ಪ್ರಯಾಣಿಸಬಹುದಾಗಿದೆ. ಇದಕ್ಕೋಸ್ಕರ 20 ಲೀಟರ್ ಪೆಟ್ರೋಲ್ ಅಗತ್ಯವಿದೆ. ನಾವು ಹಗಲು ಹೊತ್ತಿನಲ್ಲಿ ಮಾತ್ರ ಇದರಲ್ಲಿ ಪ್ರಯಾಣ ಮಾಡುತ್ತೇವೆ ಎಂದಿದ್ದಾರೆ. ವಿಮಾನ ನಿರ್ಮಾಣಕ್ಕೆ ತಗುಲಿದ ಖರ್ಚು 1.8 ಕೋಟಿ ಎಂದು ಹೇಳಲಾಗ್ತಿದೆ. ಆಶೋಕ್ ಅವರ ಕಾರ್ಯಕ್ಕೆ ಇದೀಗ ಕೇರಳ ಸೇರಿದಂತೆ ಅನೇಕ ಕಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.