ಜೈಪುರ(ರಾಜಸ್ಥಾನ): ದುಡು ಪೊಲೀಸ್ ಠಾಣೆ ಪ್ರದೇಶದಲ್ಲಿನ ಎನ್ಎಚ್ 48ರ ದುಡು ಪುಲಿಯಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ವಾಹನಗಳು ಮುಖಾಮುಖಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಸಜೀವ ದಹನವಾಗಿದ್ದಾರೆ.
ಮುಂದೆ ಚಲಿಸುತ್ತಿದ್ದ ಮಿನಿ ಟ್ರಕ್ಗೆ ಹಿಂದಿನಿಂದ ಟ್ರೈಲರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಟ್ರೈಲರ್ ಚಾಲಕ ಮತ್ತು ನಿರ್ವಾಹಕ ಸುಟ್ಟು ಕರಕಲಾಗಿದ್ದಾರೆ. ಅಫಘಾತ, ಅಗ್ನಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವ್ಯವಸ್ಥೆಯ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ಮೇರೆಗೆ ದುಡು ಎಎಸ್ಪಿ ಜ್ಞಾನ ಪ್ರಕಾಶ್ ನೇವಲ್ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ತಲುಪಿ, ಅಸ್ತವ್ಯಸ್ತಗೊಂಡಿದ್ದ ಸಂಚಾರವನ್ನು ಬೇರೆಡೆಗೆ ವರ್ಗಾಯಿಸಿ, ರಸ್ತೆ ಸಂಚಾರ ಸುಗಮಗೊಳಿಸಿದರು. ಸ್ಥಳಕ್ಕೆ ಧಾವಿಸಿದ 4 ಅಗ್ನಿಶಾಮಕ ವಾಹನಗಳು ಸುಮಾರು 3 ಗಂಟೆಗಳ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದವು.
ಆದರೆ ಅಷ್ಟೊತ್ತಿಗೆ ಟ್ರೈಲರ್‌ನ ಚಾಲಕ ಮತ್ತು ಆಪರೇಟರ್ ಜೀವಂತವಾಗಿ ಸುಟ್ಟು ಸಾವನ್ನಪ್ಪಿದ್ದಾರೆ. ಇನ್ನೂ ಮಿನಿ ಟ್ರಕ್ನ ಚಾಲಕ ಮತ್ತು ನಿರ್ವಾಹಕ ವಾಹನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಹಿತಿಯ ಪ್ರಕಾರ, ಮಿನಿ ಟ್ರಕ್ನಲ್ಲಿ ಪ್ಲೈವುಡ್ಗಳನ್ನು ತುಂಬಿದ್ದರೆ, ಟ್ರೈಲರ್ನಲ್ಲಿ ಸಕ್ಕರೆ ಚೀಲಗಳನ್ನು ತುಂಬಿಸಿದ್ದ ಹಿನ್ನೆಲೆ ಅಗ್ನಿ ಜೋರಾಗಿ ಹೊತ್ತಿಕೊಂಡಿದೆ. ಸದ್ಯ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.