ಹೈದರಾಬಾದ್ (ತೆಲಂಗಾಣ): ಮಕ್ಕಳ ಮಾರಾಟ ದಂಧೆಯ ಮತ್ತೊಂದು ಕರಾಳ ಮುಖ ಬಯಲಿಗೆ ಬಂದಿದೆ. ಗರ್ಭದಲ್ಲಿರುವಾಗಲೇ ಶಿಶುಗಳ ಜೀವಕ್ಕೆ ಬೆಲೆ ಕಟ್ಟುವುದು ಹಾಗೂ ಹೊಕ್ಕುಳಬಳ್ಳಿಯನ್ನು ಕತ್ತರಿಸುವ ಮುನ್ನವೇ ದಂಧೆಕೋರರು ಪೋಷಕರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದರಲ್ಲಿ ಆತಂಕಕಾರಿ ವಿಷಯ ಎಂದರೆ, ಕೆಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕೂಡ ಈ ದಂಧೆಗೆ ಕೈಗೊಂಡಿದ್ದಾರೆ ಎಂಬ ಆರೋಪ.
ಹೌದು, ಇತ್ತೀಚೆಗೆ ನೆರೆಯ ಮಹಾರಾಷ್ಟ್ರದ ಮುಂಬೈನಲ್ಲಿ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ. ದಾದರ್ ರೈಲು ನಿಲ್ದಾಣದಲ್ಲಿ ಮಗುವಿನೊಂದಿಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ತೆಲಂಗಾಣದ ಹೈದರಾಬಾದ್‌ನಲ್ಲಿ ಈ ದಂಧೆಯ ಮಾಸ್ಟರ್ಮೈಂಡ್ಗಳು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತೆಯೇ, ಮುಂಬೈ ಪೊಲೀಸರು ಮಾಸ್ಟರ್‌ಮೈಂಡ್‌ಗಳ ಪತ್ತೆಗಾಗಿ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಇಲ್ಲಿ ಕೆಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದ್ದು ಹೇಗೆ?: ಕೆಲ ದಿನಗಳ ತಮ್ಮ ಮಗು ನಾಪತ್ತೆಯಾಗಿರುವ ಬಗ್ಗೆ ಪೋಷಕರೊಬ್ಬರು ಮಹಾರಾಷ್ಟ್ರದ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ತನಿಖೆ ಆರಂಭಿಸಿದ್ದ ಪೊಲೀಸರು, ಮಕ್ಕಳ ಕಳ್ಳಸಾಗಣೆ ಏಜೆಂಟ್ ಸಮಾಧಾನ್ ಪಾಟೀಲ್ ಎಂಬಾತನನ್ನು ಪತ್ತೆ ಹಚ್ಚಿದ್ದಾರೆ. ಈತ ಹೈದರಾಬಾದ್‌ನಲ್ಲಿ ಖರೀದಿಸಿದ್ದ ಮಗುವನ್ನು ಮಾರಾಟ ಮಾಡಲು ವಿಫಲವಾದ ನಂತರ ಮುಂಬೈಗೆ ಹಿಂದಿರುಗುತ್ತಿದ್ದ. ಈ ವೇಳೆ, ದಾದರ್ ರೈಲು ನಿಲ್ದಾಣದಲ್ಲಿ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನಿಂದ ದೊರೆತ ಮಾಹಿತಿ ಮೇರೆಗೆ ಪೊಲೀಸರು ಈ ದಂಧೆಯ ಇತರ ಐವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿ ಸಮಾಧಾನ್ ಪಾಟೀಲ್ ನಾಸಿಕ್‌ನಲ್ಲಿ ಮಕ್ಕಳ ಮಾರಾಟ ಏಜೆಂಟ್ ಆಗಿದ್ದಾನೆ. ಆಗಾಗ ರೈಲಿನಲ್ಲಿ ಹೈದರಾಬಾದ್‌ಗೆ ಬರುತ್ತಿದ್ದ. ಇಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಗರ್ಭಿಣಿಯರ ಮಾಹಿತಿ ಸಂಗ್ರಹಿಸುತ್ತಿದ್ದ. ಹೆರಿಗೆಯ ನಂತರ ಮಗುವಿನ ಪೋಷಕರು, ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಲಾಗುತ್ತಿದ್ದ. ಮಗು ಮಾರಾಟ ಮಾಡಿದರೆ ಲಕ್ಷಗಟ್ಟಲೆ ಹಣ ನೀಡುವುದಾಗಿ ಆಮಿಷ ಒಡ್ಡಲಾಗುತ್ತಿತ್ತು ಎಂಬುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಅಲ್ಲದೇ, ಮಕ್ಕಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೆಲವೊಮ್ಮೆ ಮಕ್ಕಳನ್ನು ಕಿಡ್ನಾಪ್ ಮಾಡುತ್ತಿದ್ದರು ಎಂಬುವುದು ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಮಕ್ಕಳ ದತ್ತು ಪಡೆಯುವುದು ಕಾನೂನು ಪ್ರಕಾರ ಕಠಿಣವಾದ ಕಾರಣ ಮಕ್ಕಳಿಲ್ಲದ ಕೆಲವು ದಂಪತಿಗಳು ಅಡ್ಡಹಾದಿ ಮೂಲಕ ಖರೀದಿಸುತ್ತಿದ್ದಾರೆ. ಇದನ್ನೇ ದಂಧೆಕೋರರು ಬಂಡವಾಳ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಫೋಟೋ ಕಳುಹಿಸಿ ಬೆಲೆ ನಿರ್ಧಾರ: ಈ ದಂಧೆಯಲ್ಲಿ ಸಮಾಧಾನ್ ಪಾಟೀಲ್ ಪ್ರಮುಖ ಆರೋಪಿಯಾಗಿದ್ದಾನೆ. ಮಾರಾಟಕ್ಕೆ ಸಿದ್ಧವಾಗಿರುವ ಮಕ್ಕಳ ಫೋಟೋಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸುತ್ತಿದ್ದ. ಅಲ್ಲಿಂದ ಬಂದ ಪ್ರತಿಕ್ರಿಯೆಗಳಂತೆ ಪ್ರತಿ ಮಗುವಿಗೆ 2-3 ಲಕ್ಷ ರೂ. ಕೊಟ್ಟು ರಾತ್ರಿ ಹೊತ್ತು ನಾಸಿಕ್ಗೆ ತೆಗೆದುಕೊಂಡು ಹೋಗುತ್ತಿದ್ದ. ಒಂದು ತಿಂಗಳಿನಿಂದ ಒಂದು ವರ್ಷದೊಳಗಿನ ಸುಮಾರು 30-40 ಮಕ್ಕಳನ್ನು ಹೈದರಾಬಾದ್‌ನಲ್ಲಿ ಖರೀದಿಸಿ ನಾಸಿಕ್‌ನಲ್ಲಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮುಂಬೈ ಪೊಲೀಸರು, ಹೈದರಾಬಾದ್ ಪೊಲೀಸರ ನೆರವಿನೊಂದಿಗೆ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನ ಮಗುವನ್ನು ಕರ್ನಾಟಕದ ಮಹಿಳೆಗೆ 5 ಲಕ್ಷಕ್ಕೆ ಮಾರಿದ ದೆಹಲಿ ಬ್ರೋಕರ್!