ಅಲ್ವಾರ್(ರಾಜಸ್ಥಾನ): ಹಸುವೊಂದು ಎಂಟು ಕೆಚ್ಚಲಿನ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಇಂಥದ್ದೊಂದು ವಿಚಿತ್ರ ಘಟನೆ ರಾಜಸ್ಥಾನದ ಬಹ್ರೊರ್ನ ಜೆನ್ಪುರ್ಬಸ್ನಲ್ಲಿ ನಡೆದಿದೆ. ಈ ಸುದ್ದಿ ಹರಡುತ್ತಿದ್ದಂತೆ ಜನರು ಕರು ನೋಡಲು ಸಾಲುಗಟ್ಟಿ ನಿಂತಿದ್ದರು. ಸುನೀಲ್ ಶರ್ಮಾ ಎಂಬುವವರು ಸಾಕಿರುವ ಹಸು ಈ ವಿಶೇಷ ಕರುವಿಗೆ ಜನ್ಮ ಕೊಟ್ಟಿದೆ. ಪ್ರಕೃತಿಯ ಪವಾಡ ಇದೆಂದು ಪರಿಗಣಿಸಲಾಗಿದ್ದು, ಚೌತ ಮಾತಾ (ದೇವರ ಹೆಸರು) ಎಂದು ಕರುವಿಗೆ ಹೆಸರಿಡಲಾಗಿದೆ.
ಸುನೀಲ್ ಶರ್ಮಾ ಮಾತನಾಡಿ, "ಜನವರಿ 10ರಂದು ಎಂಟು ಕೆಚ್ಚಲು ಹೊಂದಿರುವ ಹೆಣ್ಣು ಕರುವಿಗೆ ಹಸು ಜನ್ಮ ನೀಡಿತು. ಹಸು ಮತ್ತು ಕರು ಆರೋಗ್ಯವಾಗಿವೆ. ತಿಲ್ ಚೌತ್ದಿನದಂದು ಜನ್ಮ ನೀಡಿರುವ ಈ ಕರುವಿಗೆ ಚೌತಾ ಮಾತಾ ಎಂದು ಹೆಸರಿಟ್ಟಿದ್ದೇವೆ. ಕರುವಿಗೆ ಎಂಟು ಕೆಚ್ಚಲುಗಳಿರುವ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮನೆಮುಂದೆ ಸೇರುತ್ತಿದ್ದಾರೆ" ಎಂದರು.
ಕಾರಣವೇನು? ಪಶು ವೈದ್ಯರ ಪ್ರತಿಕ್ರಿಯೆ: ವೈದ್ಯ ಪಶು ವೈದ್ಯರಾದ ಡಾ.ಸವಿತಾ ಗೋಸ್ವಾಮಿ ಪ್ರತಿಕ್ರಿಯಿಸಿ, "ಭ್ರೂಣದ ಬೆಳವಣಿಗೆಯಲ್ಲಿನ ಅಸಹಜತೆಯಿಂದಾಗಿ ಈ ರೀತಿಯ ಘಟನೆ ನಡೆಯುತ್ತಿದೆ. ಐದಕ್ಕಿಂತ ಹೆಚ್ಚು ಬೆರಳುಗಳುಳ್ಳ ಮಕ್ಕಳು ಜನಿಸುವಂತೆ, ಕರು ಕೂಡ ಅಧಿಕ ಕೆಚ್ಚಲು ಹೊಂದಿದೆ. ಭಾರತದಲ್ಲಿ ಹಸುವನ್ನು ಪವಿತ್ರ ಎಂದು ಭಾವಿಸುತ್ತಿದ್ದು, ಜನರು ದೇವರ ಸೃಷ್ಟಿ ಎಂದು ಬಣ್ಣಿಸುತ್ತಿದ್ದಾರೆ. ಆದರೆ, ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ" ಎಂದು ಹೇಳಿದರು.
ಈ ಹಿಂದೆ ನಡೆದ ಘಟನೆಗಳು..: ವರ್ಷದ ಹಿಂದೆ ರಾಜಸ್ಥಾನದಲ್ಲಿ ಎರಡು ತಲೆ ಹೊಂದಿರುವ ಕರು ಜನಿಸಿದ್ದು, ಭಾರಿ ಸುದ್ದಿಯಾಗಿತ್ತು. ಎಮ್ಮೆಯೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿತ್ತು. ಭ್ರೂಣದ ಸಮಸ್ಯೆಯಿಂದಾಗಿ ಇಂಥ ಘಟನೆಗಳು ನಡೆಯುತ್ತವೆ. ಯಾವುದೇ ಪುರಾಣದ ನಂಬಿಕೆ ಬೇಡ ಎಂದು ಪಶು ವೈದ್ಯರು ತಿಳಿಸಿದ್ದರು.
ಕಳೆದ ಡಿಸೆಂಬರ್ನಲ್ಲಿ ಹಾವೇರಿಯ ಹಿರೇಕೆರೂರಿನ ಮಡ್ಲುರು ಗ್ರಾಮದಲ್ಲೂ ಎರಡು ತಲೆಯಿದ್ದ ಕರುವಿಗೆ ಹಸು ಜನ್ಮ ನೀಡಿತ್ತು. ಆದರೆ, ಹುಟ್ಟಿದ ಕೆಲವೇ ಗಂಟೆಗಳೊಳಗೆ ಕರು ಸಾವನ್ನಪ್ಪಿತ್ತು. ಗ್ರಾಮದ ಶಾಂತಪ್ಪ ಎನ್ನುವವರ ಹಸು ವಿಶೇಷ ಕರುವಿಗೆ ಜನ್ಮ ಕೊಟ್ಟಿತ್ತು. ಈ ವಿಷಯ ತಿಳಿದ ಜನರು, ಕರುವನ್ನು ನೋಡಲು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದ್ದರು.
ಜೈವಿಕ ದೋಷದ ಪರಿಣಾಮ, ಬೇರೇನಿಲ್ಲ: ಗರ್ಭದಲ್ಲಿದ್ದಾಗ ಉಂಟಾಗುವ ಕೆಲವು ನ್ಯೂನತೆಗಳಿಂದಾಗಿ ಹಸು, ಎಮ್ಮೆಗಳು ಈ ರೀತಿ ವಿಚಿತ್ರವಾದ ಕರುಗಳಿಗೆ ಜನ್ಮ ನೀಡುವುದು ವಿಶೇಷವಲ್ಲ. ಈ ರೀತಿಯ ಅನೇಕ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ, ಇವುಗಳನ್ನು ಪ್ರಕೃತಿಯ ಪವಾಡ, ದೇವರ ಸ್ವರೂಪ ಎಂದು ಜನರು ನಂಬುತ್ತಾರೆ. ಆದರೆ, ವೈದ್ಯರುಗಳ ಪ್ರಕಾರ, ಇವು ಜೈವಿಕ ದೋಷದ ಪರಿಣಾಮವಷ್ಟೇ.
ಇದನ್ನೂ ಓದಿ: ಟಾಟಾ ಮೋಟಾರ್ಸ್ ಮತ್ತು ಫೋರ್ಡ್ ಇಂಡಿಯಾ ನಡುವಿನ ಒಪ್ಪಂದ ಪೂರ್ಣ