ತಿರುಚಿರಾಪಲ್ಲಿ (ಟಿಎನ್): ‘ಕೃಷಿಯನ್ನು ಗೌರವಿಸದ ರಾಷ್ಟ್ರ ಕುಸಿದು ಬೀಳುತ್ತದೆ‘ ಎಂದು ಖ್ಯಾತ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಭವಿಷ್ಯ ನುಡಿದಿದ್ದಾರೆ.
ಕೇಂದ್ರ ಜಾರಿಗೆ ತಂದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, 'ಕೃಷಿಯನ್ನು ಗೌರವಿಸದ ಯಾವುದೇ ದೇಶ ಬಹಳ ದಿನ ಬದುಕುಳಿಯುವುದಿಲ್ಲ' ಎಂದಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಸಬೇಕು ಎಂದು ಒತ್ತಾಯಿಸಿದ ಅವರು, ರೈತರನ್ನು ನಮ್ಮ ದೇಶದ ಅನ್ನದಾತರೆಂದು ಕರೆಯುತ್ತೇವೆ. ಅಂತಹ ಕೃಷಿಯನ್ನು ಗೌರವಿಸದ ದೇಶ ಕುಸಿದು ಬೀಳುತ್ತದೆ. ನಮ್ಮ ದೇಶ ಆ ಸ್ಥಿತಿಗೆ ತಲುಪಬಾರದು ಎಂದು ಬಯಸುವೆ ಎಂದು ಹೇಳಿದರು.
ರಕ್ತದೊತ್ತಡದ ಹಿನ್ನೆಲೆ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿನ್ನೆಯಷ್ಟೇ ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಕುರಿತು ಕೇಳಿದ ಪ್ರಶ್ನೆಗೆ, ಅವರು ಆರೋಗ್ಯವಾಗಿರಬೇಕು. ಎಲ್ಲದಕ್ಕಿಂತ ಅದು ಮುಖ್ಯ ಎಂದು ಹಾರೈಸಿದರು.
ಇದನ್ನೂ ಓದಿ : ತಮಿಳುನಾಡಿನಲ್ಲಿ ತಲೆ ಎತ್ತಲಿದೆ ತೃತೀಯ ರಂಗ: ಕಮಲ್ ಹಾಸನ್
ಮುಂದಿನ ತಿಂಗಳು ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿರುವ ರಜನಿಕಾಂತ್ ಅವರೊಂದಿಗೆ ನೀವು ಕೈ ಜೋಡಿಸಲು ಮುಂದೆ ಬರುತ್ತೀರಾ ಎಂಬ ಪ್ರಶ್ನೆಗೆ ಹಾಸನ್, ನಾವಿಬ್ಬರು ಕೂಡಿ ಸುಮಾರು ನಲವತ್ತು ವರ್ಷಗಳಿಂದ ಒಟ್ಟಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದಷ್ಟೇ ಹೇಳಿದರು.
ಅವರು ರಾಜಕೀಯಕ್ಕೆ ಪ್ರವೇಶಿಸಿದ ಮಾತ್ರಕ್ಕೆ ನಮ್ಮ ನಲವತ್ತು ವರ್ಷಗಳ ಸ್ನೇಹ ಕಳೆದುಹೋಗುವುದಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುವ ಸುಳಿವು ನೀಡಿದರು.
ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ 2021ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಅಂದುಕೊಂಡಷ್ಟು ಸಾಧಿಸಬಹುದು. ಮುಖ್ಯಮಂತ್ರಿ ಅಭ್ಯರ್ಥಿಯಂತಹ ವಿಷಯಗಳನ್ನು ಇತರ ಸಂಭಾವ್ಯ ಪಾಲುದಾರರೊಂದಿಗೆ ಚರ್ಚಿಸಬೇಕಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.