ನೈಜ ಜೀವನದಲ್ಲಿ ಘಟಿಸುವ ಕೆಲ ಘಟನೆಗಳು ಕಾಲ್ಪನಿಕ ಕಥೆಗಳಿಗಿಂತ ರೋಚಕವಾಗಿರುತ್ತವೆ. ತನ್ನ 7ನೇ ವಯಸ್ಸಿನಲ್ಲಿ ತನ್ನೂರು ತನ್ನ ಮನೆ ಬಿಟ್ಟು ಬಂದು ದೂರದ ಕಾಸರಗೋಡಿನಲ್ಲಿರುವ ಹಾಶೀಮ್ನ ಕಥೆಯೂ ಹೀಗೆಯೇ ಇದೆ. ಉತ್ತರ ಭಾರತದ ಯಾವುದೋ ರಾಜ್ಯವೊಂದರ ಹಳ್ಳಿಯಲ್ಲಿದ್ದ ಹಾಶೀಮ್. ಊರಲ್ಲಿ ಅದೇನೋ ಗಲಭೆಗಳು ಆರಂಭವಾದವು ಅಂತ ಮನೆ ಬಿಟ್ಟು ಓಡಿ ಬಂದವ ಸೇರಿದ್ದು ಕಾಸರಗೋಡು. ಅಲ್ಲಿ ಆತನಿಗೆ ಸಿಕ್ಕಿತ್ತು ಒಂದು ಆಶ್ರಯ, ಮನೆಯ ಪ್ರೀತಿ.. ಈ ಜಗತ್ತಿನಲ್ಲಿ ಯಾರೂ ಅನಾಥರಲ್ಲ.
ಹಾಶೀಮ್.. ಆತ ಕಾಸರಗೋಡಿನ ಕಾಞಂಗಾಡ್ ಪ್ರದೇಶದಲ್ಲಿನ ಆ ಮನೆಯಲ್ಲಿನ ಕುಟುಂಬದೊಂದಿಗೆ ನವೆಂಬರ್ 2005 ರಿಂದ ಇದ್ದಾನೆ. ಆತ ಅಲ್ಲಿಗೆ ಬಂದ ದಿನ ಆತನ ಕೈಯಲ್ಲೊಂದು ಬೋರ್ಡ್ ಇತ್ತು.. ಅದರ ಮೇಲೆ ಬರೆದಿತ್ತು.. "ಈ ಹುಡುಗ ಅನಾಥ. ಯಾರಾದರೂ ಈತನನ್ನು ಅನಾಥಾಶ್ರಮಕ್ಕೆ ಸೇರಿಸಿ." ಕಾಞಂಗಾಡಿನ ಸಣ್ಣ ಅಂಗಡಿಯೊಂದರ ಮುಂದೆ ಆತ ನಿಂತಿದ್ದ. ನಂತರ 15 ವರ್ಷದ ಇನ್ನೊಬ್ಬ ಬಾಲಕ ಶಾಜೀರ್ನ ಕೈಹಿಡಿದು ಆತನ ಮನೆಗೆ ನಡೆದಿದ್ದ.
ಆ ದಿನದಿಂದ ಹಾಶೀಮ್ ಆ ಮನೆಯ ಸದಸ್ಯನೇ ಆದ. ಅದರ ನಂತರ ಆತ ಮತ್ತೆ ಯಾವತ್ತೂ ಅಳುವ ಸಂದರ್ಭ ಬರಲೇ ಇಲ್ಲ. ಆದರೂ, ತನ್ನನ್ನು ಹಡೆದ ತಾಯಿ ಯಾರೆಂಬುದನ್ನು ನೋಡು ಉತ್ಕಟ ಆಸೆ ಮಾತ್ರ ಹುಡುಗನಿಗಿತ್ತು. ಶಾಜೀರ್ನ ತಂದೆ ಅಬ್ದುಲ್ ಕರೀಮ್ ಹಾಗೂ ಆತನ ತಾಯಿಯೊಂದಿಗೆ ಹಾಶೀಮ್ ನೆಮ್ಮದಿಯಾಗಿದ್ದ. ಆ ಮನೆಯ ಸದಸ್ಯನಾಗಿದ್ದುಕೊಂಡು ವಿದ್ಯಾಭ್ಯಾಸವನ್ನೂ ಮಾಡಿದ ಹಾಶೀಮ್. ನಂತರ ಅಬ್ದುಲ್ ಕರೀಮ್ ಅವರ ಸಂಬಂಧಿಯೊಬ್ಬರ ಸಹಾಯದಿಂದ ಗಲ್ಫ್ ದೇಶದ ಕಂಪನಿಯೊಂದರಲ್ಲಿ ಕೆಲಸ ಹಿಡಿದು ಅಲ್ಲಿಗೆ ತೆರಳಿದ.
ಸದ್ಯ ಈ ಹಾಶೀಮ್ ರಜೆ ಪಡೆದು ಭಾರತಕ್ಕೆ ಬಂದಿದ್ದು, ತನ್ನನ್ನು ಹಡೆದ ತಾಯಿಯನ್ನು ಹೇಗಾದರೂ ಮಾಡಿ ನೋಡಬೇಕೆಂದು ಆಸೆ ವ್ಯಕ್ತಪಡಿಸುತ್ತಿದ್ದಾನೆ. ಹಿಂದೆ ಒಂದು ಬಾರಿ ತನ್ನ ತಾಯಿಯನ್ನು ಹುಡುಕಿಕೊಂಡು ಹೊರಟಿದ್ದ ಹಾಶೀಮ್ ಮಂಗಳೂರಿನವರೆಗೆ ಬಂದು ಮುಂದೆ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದ. ನಂತರ ಅವನ ಮನೆಯವರು ಆತನನ್ನು ಹುಡುಕಿ ಮತ್ತೆ ಮನೆಗೆ ಕರೆದುಕೊಂಡು ಹೋಗಿದ್ದರು. ಇದರ ನಂತರ ಆತ ಮತ್ತೊಮ್ಮೆ ಮನೆ ಬಿಟ್ಟು ಹೋಗಲಿಲ್ಲ. ಆದರೆ ತಾಯಿಯನ್ನು ನೋಡುವ ಆಸೆ ಮಾತ್ರ ಹೋಗಿಲ್ಲ.
ಕಾಞಂಗಾಡು ತಲುಪಿದಾಗ ಚಿಕ್ಕವನಾಗಿದ್ದ ಹಾಶೀಮ್ಗೆ ತುಂಬಾ ಕಡಿಮೆ ವಿಷಯಗಳು ನೆನಪಿನಲ್ಲಿವೆ. ಆತ ಇರುವ ಊರಲ್ಲೊಂದು ಮಸೀದಿ, ಒಂದು ದೇವಸ್ಥಾನ ಇದ್ದವು. ಅಲ್ಲಿನ ಜನ ಸೀರೆಗಳ ಮೇಲೆ ಎಂಬ್ರಾಯಡರಿ ಮಾಡುತ್ತಿದ್ದರು. ತಾಯಿಯ ಹೆಸರು ಮರ್ಜಿನಾ ಹಾಗೂ ತಂದೆಯ ಹೆಸರು ಜಾಸಿನ್ ಮೊಹಮ್ಮದ್ ಇದ್ದಂತೆ ಆತನಿಗೆ ನೆನಪು. ಹಮೀದಾ ಮತ್ತು ಹುದಾ ಹೆಸರಿನ ಇಬ್ಬರು ಸಹೋದರಿಯರೂ ಇದ್ದರಂತೆ. ಹಾಶೀಮ್ಗೆ ತನ್ನೂರಿನ ಅಥವಾ ಆ ರಾಜ್ಯದ ಹೆಸರಿನ ಬಗ್ಗೆ ಏನೂ ನೆನಪಿಲ್ಲ. ಈಗ 23 ವರ್ಷ ವಯಸ್ಸಿನವನಾದ ಹಾಶೀಮ್ ತನ್ನ ನೈಜ ತಂದೆಯನ್ನು ಹುಡುಕುತ್ತಿದ್ದಾನೆ.
ಇದನ್ನು ಓದಿ:ತಾನೇ ದುರ್ಗೆಯ ಅವತಾರ ಎಂದಳು.. ಪೊಲೀಸರಿಗೇ ಮಾಟ - ಮಂತ್ರ ಮಾಡಿದ್ಳು.. ಏನಿದು ಕತೆ?