ಯಾದಗಿರಿಗುಟ್ಟ(ತೆಲಂಗಾಣ): ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಪೊಲೀಸರು ಕಾರು ತಡೆದು ನಿಲ್ಲಿಸಿರುವ ಪರಿಣಾಮ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮಗುವೊಂದು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೂರು ತಿಂಗಳ ಗಂಡು ಮಗು ಅಸ್ವಸ್ಥಗೊಂಡಿದ್ದರಿಂದ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಯಾದಗಿರಿಗುಟ್ಟ ಮಂಡಲದ ವಂಗಪಲ್ಲಿ ಗ್ರಾಮದ ಸರಸ್ವತಿ - ರೇವಂತ್ ದಂಪತಿ ತಮ್ಮ ಮೂರು ತಿಂಗಳ ಮಗುವನ್ನ ಅನಾರೋಗ್ಯದ ಕಾರಣ ಜನಾಂವ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಪಾಸಣೆ ನಡೆಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗೋಸ್ಕರ ಹೈದರಾಬಾದ್ಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದಾರೆ. ಈ ವೇಳೆ ಬಾಲಕನನ್ನ ಕಾರಿನಲ್ಲಿ ಹೈದರಾಬಾದ್ಗೆ ಕರೆದುಕೊಂಡು ಹೋಗುತ್ತಿದ್ದಾಗ ತಪಾಸಣೆಗೋಸ್ಕರ ಕಾರು ತಡೆದು ನಿಲ್ಲಿಸಿದ್ದಾರೆ. ಜೊತೆಗೆ ಸಾವಿರ ರೂಪಾಯಿ ದಂಡ ಕಟ್ಟುವಂತೆ ಚಲನ್ ನೀಡಿದ್ದಾರೆ.
ಈ ವೇಳೆ, ಪೋಷಕರು ತಮ್ಮ ಮಗುವನ್ನ ತುರ್ತು ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲು ಮಾಡಬೇಕಾಗಿದೆ. ತಕ್ಷಣ ಬಿಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದಕ್ಕೆ ಪೊಲೀಸರು ಒಪ್ಪಿಗೆ ನೀಡಿಲ್ಲ. ಚಲನ್ ಪಾವತಿ ಮಾಡಿದ ಬಳಿಕ ಕಳುಹಿಸುತ್ತೇವೆ ಎಂದು, ಅರ್ಧ ಗಂಟೆಗಳ ಕಾಲ ತಡೆದು ನಿಲ್ಲಿಸಿದ್ದಾರೆ. ಚಲನ್ ಪಾವತಿ ಮಾಡಿದ ಬಳಿಕ ಕಾರು ಬಿಟ್ಟು ಕಳುಹಿಸಿದ್ದಾರೆ.
ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿದ್ದರೆ ತಮ್ಮ ಮಗು ಬದುಕುಳಿಯುತ್ತಿತ್ತು ಎಂದು ತಾಯಿ ಕಣ್ಣೀರು ಹಾಕಿದ್ದಾರೆ. ಜೊತೆಗೆ ಪೊಲೀಸರ ವರ್ತನೆಗೆ ಹಿಡಿಶಾಪ ಹಾಕಿದ್ದಾರೆ.
ಇದನ್ನೂ ಓದಿ: ಗೋವಾಕ್ಕೆ ತೆರಳಿದ್ದ ಯುವಕರ ದರೋಡೆ; ಹುಡುಗಿಯರೊಂದಿಗೆ ಅರೆಬೆತ್ತಲೆ ವಿಡಿಯೋ ಮಾಡಿ ಬ್ಲಾಕ್ಮೇಲ್!
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಯಾದಗಿರಿಗುಟ್ಟ ಟ್ರಾಫಿಕ್ ಸಿಐ ಸೈದಯ್ಯ, ತುರ್ತು ಸಂದರ್ಭದಲ್ಲಿ ಹೋಗುವ ವಾಹನಗಳನ್ನ ನಾವು ಎಂದಿಗೂ ತಡೆದು ನಿಲ್ಲಿಸುವುದಿಲ್ಲ. ಅಂತಹ ಸಂದರ್ಭ ಎದುರಾದರೆ ಸ್ವಂತ ವಾಹನದಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.