ಚಿತ್ತೂರು(ಆಂಧ್ರಪ್ರದೇಶ): 'ನಾನು ಶಾಲೆಗೆ ಹೋಗುವ ದಾರಿಯಲ್ಲಿ ಜೆಸಿಬಿಯಿಂದ ಅಗೆಯಲಾಗಿದೆ. ಅಲ್ಲದೇ, ಅಲ್ಲಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿ ರಸ್ತೆ ಅಡ್ಡಗಟ್ಟಲಾಗಿದೆ. ನೀವು ಬಂದು ಅದನ್ನು ಸರಿಪಡಿಸಿ'..! ಇದು 6 ವರ್ಷದ ಬಾಲಕನೋರ್ವ ಪೊಲೀಸರಿಗೆ ಸಲ್ಲಿಸಿದ ದೂರು.
ಮಕ್ಕಳು ಪೊಲೀಸರನ್ನು ಕಂಡ್ರೇನೆ ಹೆದರಿ ಓಡಿ ಹೋಗ್ತಾರೆ. ಆದರೆ, ಚಿತ್ತೂರು ಜಿಲ್ಲೆಯ ಈ ಬಾಲಕ ಮಾತ್ರ ತಾನೇ ನೇರ ಪೊಲೀಸ್ ಠಾಣೆಗೆ ಹೋಗಿ ತನ್ನ ದೂರನ್ನು ಸಲ್ಲಿಸಿದ್ದಾನೆ.
ಚಿತ್ತೂರು ಜಿಲ್ಲೆಯ ಪಲಮೇರ್ನ ಆದರ್ಶ ಶಾಲೆಯ ಬಳಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ತನಗೆ ಶಾಲೆಗೆ ಹೋಗಲು ಮತ್ತು ಬರಲು ಕಿರಿಕಿರಿಯುಂಟಾಗಿದೆ. ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಈಗಲೇ ಎಲ್ಲಾ ಪೊಲೀಸರು ಸ್ಥಳಕ್ಕೆ ಬರಬೇಕು ಎಂದು ಶಾಲೆಯ ವಿದ್ಯಾರ್ಥಿ ಕಾರ್ತಿಕೇಯನ್ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗೇ ನೇರ ದೂರು ನೀಡಿದ್ದಾನೆ.
ಇದನ್ನು ಕೇಳಿ ದಂಗಾದ ಪೊಲೀಸ್ ಅಧಿಕಾರಿಯು ಕಾರ್ತಿಕೇಯನ್ನ ಅಹವಾಲು ಆಲಿಸಿ, ತಾನೇ ಬಂದು ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಆ ಬಾಲಕನಿಗೆ ಭರವಸೆ ನೀಡಿದ್ದಾರೆ. ಅಲ್ಲದೇ, ತಮ್ಮ ಫೋನ್ ನಂಬರ್ ಅನ್ನು ಬಾಲಕನಿಗೆ ನೀಡಿ ಏನಾದರೂ ಸಮಸ್ಯೆಯಾದರೆ ನನಗೆ ಕರೆ ಮಾಡು ಎಂದೇಳಿ ಕಳುಹಿಸಿದ್ದಾರೆ.
ಈ ವೇಳೆ ಇಬ್ಬರ ಮಧ್ಯೆ ನಡೆದ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ತೆಲಂಗಾಣದಲ್ಲಿ 2ನೇ ತರಗತಿ ವಿದ್ಯಾರ್ಥಿಯೋರ್ವ ಸಹ ತನ್ನ ಶಾಲೆಯ ಶಿಕ್ಷಕರ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿ, ದೂರು ನೀಡಿದ್ದ.
ಓದಿ: 'ಪತ್ನಿ ಮಾಂಸದ ಅಡುಗೆ ಮಾಡಿಲ್ಲ': 100 ನಂಬರ್ಗೆ 6 ಬಾರಿ ಕರೆ ಮಾಡಿದ ವ್ಯಕ್ತಿ.. ಮುಂದೇನಾಯ್ತು?