ಅನಕಾಪಲ್ಲಿ (ಆಂಧ್ರ ಪ್ರದೇಶ): ಇಲ್ಲಿನ ಮಡುಗುಳ ಮಂಡಲದಲ್ಲಿ 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ. ಇದೇ ಪ್ರದೇಶದಲ್ಲಿ ಎರಡು ದಿನಗಳ ಹಿಂದೆಯಷ್ಟೇ 12 ಅಡಿಯ ಹಾವನ್ನು ರಕ್ಷಣೆ ಮಾಡಲಾಗಿತ್ತು.
ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿರುವ ಈ ಕಾಳಿಂಗ ಸರ್ಪ ಗದ್ದೆಯಲ್ಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಇದನ್ನು ಕಂಡು ಗಾಬರಿಗೊಂಡ ಜನರು ಕೂಡಲೇ ಈಸ್ಟರ್ನ್ ಗಾರ್ಡ್ ವೈಲ್ಡ್ ಲೈಫ್ ಸೊಸೈಟಿ ಸದಸ್ಯರಿಗೆ ಮಾಹಿತಿ ನೀಡಿದ್ದರು. ಅಂತೆಯೇ ಸ್ಥಳಕ್ಕೆ ಬಂದ ಸದಸ್ಯರು ಹಲವಾರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ ಹಾವನ್ನು ಸೆರೆ ಹಿಡಿದಿದ್ದಾರೆ.
ಈ ಹಾವಿನ ಉದ್ದ 15 ಅಡಿ ಇತ್ತು. ನಂತರ ಈ ನಾಗರ ಹಾವನ್ನು ವಂಟ್ಲಾ ಮಾಮಿಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಎರಡು ದಿನಗಳ ಹಿಂದೆ ಇದೇ ಮಂಡಲದ ಲಕ್ಷ್ಮೀಪೇಟೆಯಲ್ಲಿ 12 ಅಡಿಯ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದಿದ್ದರು.
ಇದನ್ನೂ ಓದಿ: ಹಾವಿನ ದ್ವೇಷ..! 10 ದಿನದಲ್ಲಿ 5ಕ್ಕೂ ಹೆಚ್ಚು ಬಾರಿ ಕಚ್ಚಿದ್ರೂ ಯುವಕ ಬಚಾವ್!