ನವದೆಹಲಿ: ಜಗತ್ತು ಕೋವಿಡ್ ವಿರುದ್ಧ ಹೋರಾಡಲು ಭಾರತ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಿದೆ. ದೇಶದಲ್ಲಿ ಉತ್ಪಾದನೆಯಾಗುವ ಕೋವಿಡ್ ಲಸಿಕೆಗಳನ್ನು ಈಗಾಗಲೇ ಸಾಕಷ್ಟು ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ. ಪ್ರಸ್ತುತ ಸುಮಾರು 96 ರಾಷ್ಟ್ರಗಳು ಭಾರತದಲ್ಲಿ ಉತ್ಪಾದನೆಯಾಗುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ಗೆ ಮಾನ್ಯತೆ ನೀಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟನೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಈಗಾಗಲೇ 8 ಕೋವಿಡ್ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಗೂ ವಿಶ್ವ ಆರೋಗ್ಯ ಸಂಘಟನೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸುಮಾರು 96 ರಾಷ್ಟ್ರಗಳು ತಮ್ಮಲ್ಲಿ ಈ ವ್ಯಾಕ್ಸಿನ್ಗಳಿಗೆ ಮಾನ್ಯತೆ ನೀಡಿವೆ.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಸರ್ಕಾರವು ಉಳಿದ ದೇಶಗಳೊಂದಿಗೂ ಮಾತುಕತೆ ನಡೆಸುತ್ತಿದೆ ಎಂದಿದ್ದಾರೆ. ಭಾರತದಲ್ಲಿ ಅತಿ ದೊಡ್ಡ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ದೇಶದಲ್ಲಿ ಕೋವಿಡ್ ಲಸಿಕೆ ಪೂರೈಕೆಯಲ್ಲಿ ಕೊರತೆಯಿಲ್ಲ. ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಸುಮಾರು 15.77 ಕೋಟಿ ಲಸಿಕೆಗಳಿದ್ದು, ಬಳಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಇದನ್ನೂ ಓದಿ: ತಮಿಳುನಾಡಿನಲ್ಲಿ ರೆಡ್ ಅಲರ್ಟ್: ಈವರೆಗೆ ಐವರ ಸಾವು,12 ಜಿಲ್ಲೆಗಳಲ್ಲಿ ರಜೆ ಘೋಷಣೆ