ಡೆಹ್ರಾಡೂನ್ (ಉತ್ತರಾಖಂಡ): ಪ್ರಸಿದ್ಧ ಚಾರ್ಧಾಮ್ ಯಾತ್ರೆಯಲ್ಲಿ ಯಾತ್ರಿಕರ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೇ 3ರಿಂದ ಇದುವರೆಗೆ 91 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಬಹುಪಾಲು ಜನರು ಯಾತ್ರೆ ಸಂದರ್ಭದಲ್ಲಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ.
ಕೊರೊನಾ ಹಾವಳಿಯ ಎರಡು ವರ್ಷಗಳ ನಂತರ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೆ 11.50 ಲಕ್ಷ ಜನರು ಚಾರ್ಧಾಮ್ಗೆ ಭೇಟಿ ನೀಡಿದ್ದಾರೆ. ಇದರಲ್ಲಿ 91 ಮಂದಿ ಯಾತ್ರಿಕರು ಸಾವನ್ನಪ್ಪಿದ್ದಾರೆ. ಈ ಪೈಕಿ ಕೇದಾರನಾಥದಲ್ಲಿ 44, ಬದರಿನಾಥದಲ್ಲಿ 17, ಯಮುನೋತ್ರಿಯಲ್ಲಿ 24 ಮತ್ತು ಗಂಗೋತ್ರಿಯಲ್ಲಿ 6 ಜನ ಭಕ್ತರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಹೆಚ್ಚಿನ ಯಾತ್ರಿಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದೇ ಕಾರಣದಿಂದ ಯಾತ್ರೆ ಬರುವವರಿಗೆ ಆರೋಗ್ಯ ಸೇವೆಗಳನ್ನು ಹೆಚ್ಚಿಸಲಾಗಿದೆ. ನಾಲ್ಕು ಧಾಮ್ಗಳಲ್ಲಿ 169ಕ್ಕೂ ಹೆಚ್ಚು ವೈದ್ಯರನ್ನು ನಿಯೋಜಿಸಲಾಗಿದೆ ಎಂದು ಉತ್ತರಾಖಂಡದ ಆರೋಗ್ಯ ಇಲಾಖೆಯ ಮಹಾ ನಿರ್ದೇಶಕಿ ಶೈಲಜಾ ಭಟ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ಯಾತ್ರೆಗೆ ಒಟ್ಟು 40,351 ಯಾತ್ರಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. 1,675 ಯಾತ್ರಿಕರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1,208 ಪುರುಷರು ಮತ್ತು 467 ಮಹಿಳೆಯರು ಸೇರಿದ್ದಾರೆ. ಜೊತೆಗೆ 935 ಜನರಿಗೆ ಆಕ್ಸಿಜನ್ ಸೌಲಭ್ಯ ಒದಗಿಸಲಾಗಿದೆ ಎಂದು ರುದ್ರಪ್ರಯಾಗ ಮುಖ್ಯ ವೈದ್ಯಾಧಿಕಾರಿ ವಿಂದೇಶ್ ಶುಕ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಇಬ್ಬರು ಗರ್ಭಿಣಿಯರು, ಎರಡು ಮಕ್ಕಳು ಸೇರಿ ಐವರ ಮೃತದೇಹ ಬಾವಿಯಲ್ಲಿ ಪತ್ತೆ.. ಕೊಲೆ ಶಂಕೆ!?